ADVERTISEMENT

ಖಾಸಗಿ ವಾಹಿನಿಗಳ ವಿರುದ್ಧ ನಿರ್ಮಾಪಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಬೆಂಗಳೂರು: ಸಿನಿಮಾಗಳ ಉಪಗ್ರಹ ಹಕ್ಕು ಖರೀದಿಯಲ್ಲಿ ಖಾಸಗಿ ಟಿ.ವಿ. ವಾಹಿನಿಗಳು ತಾರತಮ್ಯ ನೀತಿ ಅನುಸರಿಸುತ್ತಿವೆ ಎಂದು ಕನ್ನಡ ಚಿತ್ರರಂಗದ ಕೆಲ ನಿರ್ಮಾಪಕರು ಆರೋಪಿಸಿದ್ದಾರೆ.

ಟಿ.ವಿ. ವಾಹಿನಿಗಳು ದೊಡ್ಡ ನಿರ್ಮಾಪಕರ ಮತ್ತು ಕೆಲವೇ ನಾಯಕ ನಟರ ಚಿತ್ರಗಳ ಹಕ್ಕುಗಳನ್ನು ಮಾತ್ರ ಖರೀದಿಸುತ್ತಿವೆ. ಇನ್ನೂ ಬೆಳೆಯುತ್ತಿರುವ ಹಾಗೂ ಅಷ್ಟೇನೂ ಖ್ಯಾತರಲ್ಲದ ನಾಯಕ ನಟರು ನಟಿಸಿರುವ ಚಿತ್ರಗಳನ್ನು ಕೊಳ್ಳುತ್ತಿಲ್ಲ.

ಹೀಗಾಗಿ ಸಣ್ಣಪುಟ್ಟ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವು ನಿರ್ಮಾಪಕರು ವಾಹಿನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಟಿಆರ್‌ಪಿ ಹಾಗೂ ಜಾಹೀರಾತು ಆದಾಯವನ್ನು ಗಮನದಲ್ಲಿಟ್ಟುಕೊಂಡು ಇನ್ನು ಮುಂದೆ ಐವರು ನಾಯಕ ನಟರ (ಪುನೀತ್‌ರಾಜ್‌ಕುಮಾರ್, ದರ್ಶನ್, ಸುದೀಪ್, ಶಿವರಾಜ್‌ಕುಮಾರ್ ಮತ್ತು ಉಪೇಂದ್ರ) ಚಿತ್ರಗಳ ಉಪಗ್ರಹ ಹಕ್ಕುಗಳನ್ನು ಮಾತ್ರ ಖರೀದಿಸುವುದಾಗಿ ಸುವರ್ಣ ವಾಹಿನಿಯ ಸಿಇಓ ಅನೂಪ್ ಚಂದ್ರಶೇಖರ್ ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ನಿರ್ಮಾಪಕರು, ಈ ತೀರ್ಮಾನದ ಹಿಂದೆ ಡಬ್ಬಿಂಗ್ ಚಿತ್ರಗಳನ್ನು ಪ್ರಸಾರ ಮಾಡುವ ಹುನ್ನಾರವಿದೆ ಎಂದು ಹೇಳಿದರು.

ನಮ್ಮ ಸಿನಿಮಾಗಳು ಬೇಡವೆನ್ನುವ ಈ ವಾಹಿನಿಗಳು ಅವುಗಳ ಹಾಡು ಮತ್ತು ದೃಶ್ಯಾವಳಿಗಳನ್ನು ಉಚಿತವಾಗಿ ಪ್ರಸಾರ ಮಾಡುತ್ತಿವೆ. ಅವುಗಳಿಗೆ ರಾಯಧನ ನೀಡಲಿ ಎಂದು ರಾಜೇಂದ್ರ ಸಿಂಗ್ ಬಾಬು ಆಗ್ರಹಿಸಿದರು. ಗುಣಮಟ್ಟ ಆಧಾರಿತ ಚಿತ್ರಗಳನ್ನು ಕೊಳ್ಳುವುದರ ಬಗ್ಗೆ ವಾಹಿನಿಗಳು ಸೂಕ್ತ ಮಾನದಂಡ ರೂಪಿಸಬೇಕು. ಅದನ್ನು ಬಿಟ್ಟು ಏಕಾಏಕಿ ಈ ರೀತಿ ನಿರ್ಣಯ ಕೈಗೊಳ್ಳುವುದು ಸರಿಯಲ್ಲ ಎಂದರು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿರಿಯ ನಟ ಅಂಬರೀಷ್, ಐದು ಮಂದಿ ನಾಯಕ ನಟರು, ನಿರ್ಮಾಪಕರ ಸಂಘ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯೊಂದಿಗೆ ಚರ್ಚಿಸಲಾಗುವುದು. ಇದಕ್ಕೆ ನಿರ್ಮಾಪಕರ ಸಂಘ ಹಾಗೂ ಟಿ.ವಿ. ವಾಹಿನಿಗಳು ಸ್ಪಂದಿಸುವ ಭರವಸೆ ಇದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಿ. ವಿಜಯ್ ಕುಮಾರ್, ನಿರ್ಮಾಪಕರ ಅಹವಾಲುಗಳನ್ನು ಆಲಿಸಿದ್ದು, ಸೂಕ್ತ ಚರ್ಚೆ ನಡೆಸಿ ಮುಂದಿನ ಹೆಜ್ಜೆಯ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ನಿರ್ಮಾಪಕರಾದ ಬಿ.ಆರ್. ಕೇಶವ್, ಜೋಸೈಮನ್, ಬಾ.ಮ. ಹರೀಶ್, ರೇಣುಕುಮಾರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಇದ್ದರು.

`ಒಳ್ಳೆಯ ಸಿನಿಮಾಗಳನ್ನು ಖಂಡಿತಾ ಕೊಳ್ಳುತ್ತೇವೆ: ಸ್ಟಾರ್ ನಟರ ಚಿತ್ರಗಳನ್ನು ಮಾತ್ರ ಕೊಳ್ಳುವುದಾಗಿ ಹೇಳಿಲ್ಲ. ದೊಡ್ಡ ನಟರಿರುವ ಅಥವಾ ಬಾಕ್ಸ್‌ಆಫೀಸ್‌ನಲ್ಲಿ ಗೆದ್ದ ಚಿತ್ರಗಳನ್ನು ಜಾಹೀರಾತುದಾರರು ಬಯಸುತ್ತಾರೆ. ಅವುಗಳಿಗೆ ಆದ್ಯತೆ ನೀಡುವುದು ಅನಿವಾರ್ಯ.

ADVERTISEMENT

ನಿರ್ಮಾಪಕರು ಉತ್ತಮ ಗುಣಮಟ್ಟದ ಚಿತ್ರಗಳನ್ನು ಮಾಡಲಿ. ಖಂಡಿತಾ ಕೊಳ್ಳುತ್ತೇವೆ~ ಎಂದು ಸುವರ್ಣ ವಾಹಿನಿಯ ಸಿಇಓ ಅನೂಪ್ ಚಂದ್ರಶೇಖರ್ ಹೇಳಿದರು. `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ವಾಹಿನಿ ತಂಡವೊಂದನ್ನು ಸಿದ್ಧಪಡಿಸಿದ್ದು, ಅದು ಸಿನಿಮಾಗಳನ್ನು ವೀಕ್ಷಿಸಿ ಅವುಗಳ ಗುಣಮಟ್ಟದ ಆಧಾರದ ಮೇಲೆ ಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತದೆಯೇ ಹೊರತು, ಯಾವುದೇ ನಾಯಕ ನಟ ನಟಿಸಿದ್ದಾನೆ ಎಂಬ ಆಧಾರದಲ್ಲಿ ಅಲ್ಲ.

ನಿರ್ಮಾಪಕರಿಗೆ ಉಪಗ್ರಹ ಹಕ್ಕುಗಳೇ ಮೂಲ ಆದಾಯವಾಗಬಾರದು. ಇದು ಹೆಚ್ಚುವರಿ ಆದಾಯವಷ್ಟೇ. ಮಾರುಕಟ್ಟೆಯಲ್ಲಿ ಚೆನ್ನಾಗಿರುವ ವಸ್ತುಗಳನ್ನು ಮಾತ್ರ ಕೊಳ್ಳುಕೊಳ್ಳುತ್ತಾರೆ. ಹಾಗೆಯೇ ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳನ್ನೂ ಕೊಳ್ಳಲು ಸಾಧ್ಯವಿಲ್ಲ.

ಕುಟುಂಬವಿಡೀ ಕುಳಿತು ನೋಡುವ ಸಿನಿಮಾಗಳು ಬರಲಿ. ಅವುಗಳನ್ನು ಕೊಳ್ಳುತ್ತೇವೆ. ಸ್ಟಾರ್ ನಟರು ಇಲ್ಲದಿದ್ದರೂ ಉತ್ತಮ ಚಿತ್ರ ಎಂಬ ಕಾರಣಕ್ಕೆ `ಸ್ನೇಹಿತರು~ ಚಿತ್ರವನ್ನು ಕೊಂಡಿದ್ದೇವೆ. ಕನ್ನಡ ಚಿತ್ರಗಳಿಗೆ ವಾಹಿನಿ ಪ್ರೋತ್ಸಾಹ ನೀಡುತ್ತದೆ~ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.