ADVERTISEMENT

ಗಣಪತಿ ಆತ್ಮಹತ್ಯೆ ಪ್ರಕರಣ: 26ಕ್ಕೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 20:13 IST
Last Updated 23 ಫೆಬ್ರುವರಿ 2018, 20:13 IST

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ವರದಿ ಸಿದ್ಧಪಡಿಸಿರುವ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ಆಯೋಗ, ಇದೇ 26ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಗೃಹ ಇಲಾಖೆ ಕಾರ್ಯದರ್ಶಿಗೆ ವರದಿ ಸಲ್ಲಿಸಲಾಗುವುದು ಎಂದು ಆಯೋಗದ ಮೂಲಗಳು ತಿಳಿಸಿವೆ.

ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ 2016ರ ಜುಲೈ 7ರಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಗಣಪತಿ ಶವ ಪತ್ತೆಯಾಗಿತ್ತು. ಆತ್ಮಹತ್ಯೆಗೂ ಮುನ್ನ ಸ್ಥಳೀಯ ಟಿವಿ ಚಾನಲ್‌ಗೆ ಸಂದರ್ಶನ ನೀಡಿದ್ದ ಗಣಪತಿ, ಸಚಿವ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಹಾಗೂ ಪ್ರಣವ್ ಮೊಹಂತಿ ಕಿರುಕುಳ ನೀಡಿದ್ದರೆಂದು ಆರೋಪಿಸಿದ್ದರು.

ADVERTISEMENT

ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ವೈಯಕ್ತಿಕ ಕಾರಣಗಳಿಂದ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಿಐಡಿ ಪ್ರಕರಣ ಮುಕ್ತಾಯಗೊಳಿಸಿತ್ತು.

ವಿರೋಧ ಪಕ್ಷಗಳಿಂದ ಒತ್ತಡ ಹೆಚ್ಚಿದ್ದರಿಂದ ಸರ್ಕಾರ ನ್ಯಾಯಮೂರ್ತಿ ಕೇಶವನಾರಾಯಣ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ ಮಾಡಿತ್ತು. ಒಂದೂವರೆ ವರ್ಷ ಕಾಲ ವಿಚಾರಣೆ ನಡೆಸಿದ ಆಯೋಗ 49 ಜನರ ಹೇಳಿಕೆ ದಾಖಲಿಸಿಕೊಂಡಿದೆ. ಅಗತ್ಯ ಕಾಣದೇ ಇದ್ದುದರಿಂದ ಕೆ.ಜೆ. ಜಾರ್ಜ್, ಎ.ಎಂ. ಪ್ರಸಾದ್ ಹಾಗೂ ಪ್ರಣವ್ ಮೊಹಂತಿ ವಿಚಾರಣೆ ನಡೆಸಿಲ್ಲ ಎಂದು ಆಯೋಗದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.