ADVERTISEMENT

ಗಣಿ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ಪ್ರಸ್ತಾವ ನೆನಗುದಿಗೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 19:54 IST
Last Updated 6 ಜನವರಿ 2014, 19:54 IST

ಬೆಂಗಳೂರು: ಕಾಂಗ್ರೆಸ್‌ ಶಾಸಕ ಅನಿಲ್‌ ಲಾಡ್‌ ಒಡೆತನದ ಕೆನರಾ ಮಿನರಲ್ಸ್‌, ಬಿಜೆಪಿ ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ಅವರ ಪುತ್ರರು ಪಾಲು­ದಾರ­ರಾಗಿರುವ ಮಾತಾ ಮಿನರಲ್ಸ್‌ ಸೇರಿದಂತೆ ಐದು ಗಣಿ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸುವ ಕುರಿತು ಮಂಡಿಸಿದ್ದ ಪ್ರಸ್ತಾವ ದೀರ್ಘ ಕಾಲದಿಂದ ಸರ್ಕಾರದ ಮುಂದೆ ಬಾಕಿ ಇರುವುದು ಬಹಿರಂಗವಾಗಿದೆ.

ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು 2011ರ ಜುಲೈ 27ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿ ಕುರಿತು ಅಧ್ಯಯನ ನಡೆಸಲು ಸರ್ಕಾರ ಒಂದು ಉನ್ನತಮಟ್ಟದ ಸಮಿತಿ ರಚಿಸಿತ್ತು. ಈ ಸಮಿತಿಯು, ಲೋಕಾಯುಕ್ತರ ವರದಿ, ಅದಕ್ಕೆ ಪೂರಕವಾಗಿ ಐಎಫ್‌ಎಸ್‌ ಅಧಿಕಾರಿ ಡಾ.ಯು.ವಿ.ಸಿಂಗ್‌ ನೇತೃತ್ವದ ತನಿಖಾ ತಂಡ ಸಲ್ಲಿಸಿದ್ದ ವರದಿ ಮತ್ತು ದಾಖಲೆಗಳ ಅಧ್ಯಯನ ನಡೆಸಿತ್ತು.

ಉನ್ನತಮಟ್ಟದ ಸಮಿತಿಯು ಗಂಭೀರ ಸ್ವರೂಪದ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸು­ತ್ತಿರುವ ಐದು  ಕಂಪೆನಿಗಳ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಬಳಿಕ ಈ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸುವ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ಮಂಡಿಸ­ಲಾಗಿತ್ತು. ಈ ಕುರಿತ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಡೆಕ್ಕನ್‌ ಮೈನಿಂಗ್‌ ಕಂಪೆನಿ, ಕೆನರಾ ಮಿನರಲ್ಸ್‌ ಲಿಮಿಟೆಡ್‌, ಲತಾ ಮೈನಿಂಗ್‌ ಕಂಪೆನಿ, ಮಾತಾ ಮಿನರಲ್ಸ್‌ ಲಿಮಿಟೆಡ್‌ ಹಾಗೂ ಆರ್‌.ಪ್ರವೀಣ್‌­ಚಂದ್ರ ಗಣಿ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಲು ಶಿಫಾರಸು ಮಾಡಲಾಗಿತ್ತು. ಈ ಪೈಕಿ ಡೆಕ್ಕನ್‌ ಮೈನಿಂಗ್‌ ಕಂಪೆನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಆದೇಶ­ದಂತೆ ಸಿಬಿಐ ತನಿಖೆ ನಡೆದಿದೆ. ಕಂಪೆನಿಯ ಮಾಲೀಕರು ಸೇರಿದಂತೆ ಹಲ­ವರ ವಿರುದ್ಧ ಸಿಬಿಐ ಈಗಾಗಲೇ ನ್ಯಾಯಾ­ಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.

ತುಮಕೂರು ಜಿಲ್ಲೆಯಲ್ಲಿ ಗಣಿ ಹೊಂದಿರುವ ಕೆನರಾ ಮಿನರಲ್ಸ್ ಶಾಸಕ ಅನಿಲ್‌ ಲಾಡ್‌ ಅವರ ಒಡೆತನಕ್ಕೆ ಸೇರಿದ ಕಂಪೆನಿ. ಮಾತಾ ಮಿನರಲ್ಸ್‌ ಕೂಡ ತುಮಕೂರು ಜಿಲ್ಲೆಯಲ್ಲೇ ಗಣಿ ಹೊಂದಿತ್ತು. ಸೋಮಣ್ಣ ಅವರ ಪುತ್ರರಾದ ಅರುಣ್‌ ಸೋಮಣ್ಣ ಮತ್ತು ನವೀನ್‌ ಸೋಮಣ್ಣ ಕೂಡ ಈ ಕಂಪೆನಿಯ ಪಾಲುದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.