ADVERTISEMENT

ಗಣ್ಯರಿಗೆ ಮಂಪರು ಪರೀಕ್ಷೆ!

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 19:55 IST
Last Updated 8 ಫೆಬ್ರುವರಿ 2011, 19:55 IST

ಬೆಂಗಳೂರು:  ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಭೂಹಗರಣದ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಕುತೂಹಲದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಹಿರಿಯ ನಾಗರಿಕರೊಬ್ಬರು ಸಲ್ಲಿಸಿದ್ದಾರೆ.

ಈ ಹಗರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಹಗರಣದ ಎಲ್ಲ ಆಪಾದಿತರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎನ್ನುವುದು 70ರ ಹರೆಯದ ಎ.ಸಿ. ರಂಗಸ್ವಾಮಿ ಎನ್ನುವವರ ಕೋರಿಕೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ಈ ಪರೀಕ್ಷೆಗೆ ಒಳಪಡಿಸುವಂತೆ ತುಮಕೂರು ಜಿಲ್ಲೆಯ ಮಧುಗಿರಿಯ ರಂಗಸ್ವಾಮಿ ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಭೂಹಗರಣಕ್ಕೆ ಸಂಬಂಧಿಸಿದಂತೆ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ಅನೇಕ ದಾಖಲೆಗಳನ್ನು ತೋರಿಸುತ್ತಿದ್ದಾರೆ. ಆದರೆ ಇದರಲ್ಲಿ ನಿಜವಾದ ತಪ್ಪಿತಸ್ಥರು ಯಾರು ಎನ್ನುವುದು ತಿಳಿಯುತ್ತಿಲ್ಲ. ಮಂಪರು ಪರೀಕ್ಷೆಯಿಂದ ಮಾತ್ರ ಸತ್ಯ ತಿಳಿಯಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯ.

ಈ ಅರ್ಜಿಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಯಾವ ನಿಲುವು ತಾಳಲಿದೆ ಎನ್ನುವುದು ಕುತೂಹಲಕರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.