ADVERTISEMENT

ಗರ್ಭಿಣಿಯರ ಮಧುಮೇಹ ನಿಯಂತ್ರಣಕ್ಕೆ ‘ಸ್ವೀಟ್‌ ಹಾರ್ಟ್‌’ ಯೋಜನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ನಟಿ ಶ್ರೀಲೀಲಾ ‘ಸ್ವೀಟ್‌ ಹಾರ್ಟ್‌ ಯೋಜನೆ’ಗೆ ಚಾಲನೆ ನೀಡಿದರು. ಅವರು ಈ ಯೋಜನೆಯ ರಾಯಭಾರಿ ಆಗಿದ್ದಾರೆ. –ಪ್ರಜಾವಾಣಿ ಚಿತ್ರ
ನಟಿ ಶ್ರೀಲೀಲಾ ‘ಸ್ವೀಟ್‌ ಹಾರ್ಟ್‌ ಯೋಜನೆ’ಗೆ ಚಾಲನೆ ನೀಡಿದರು. ಅವರು ಈ ಯೋಜನೆಯ ರಾಯಭಾರಿ ಆಗಿದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗರ್ಭಿಣಿಯರಲ್ಲಿನ ಮಧುಮೇಹ ಮತ್ತು ಹೃದ್ರೋಗಗಳ ನಿಯಂತ್ರಣಕ್ಕಾಗಿ ಏಷ್ಯನ್‌ ರಿಸರ್ಚ್‌ ಆ್ಯಂಡ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸ್ಕಿಲ್‌ ಟ್ರಾನ್ಸ್‌ಫರ್‌ (ಆರ್ಟಿಸ್ಟ್‌) ಸಂಸ್ಥೆಯು ‘ಸ್ವೀಟ್‌ ಹಾರ್ಟ್‌’ ಯೋಜನೆ ಜಾರಿಗೊಳಿಸಿದೆ.

ದೇಶದಲ್ಲಿ 50 ಲಕ್ಷ ಗರ್ಭಿಣಿಯರು ಮಧುಮೇಹದಿಂದ ಬಳಲುತ್ತಿದ್ದಾರೆ. ಇವರಿಗೆ ಜನಿಸುವ ಮಕ್ಕಳು ಬೊಜ್ಜಿನಿಂದ ಬಳಲುವ ಹಾಗೂ ಕಿರಿಯ ವಯಸ್ಸಿನಲ್ಲೇ ಮಧುಮೇಹ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಮುಂದಿನ ತಲೆಮಾರನ್ನು ಈ ಸಮಸ್ಯೆಯಿಂದ ಪಾರು ಮಾಡಬೇಕಿದೆ. ಇದಕ್ಕಾಗಿ ಗರ್ಭಧಾರಣೆ ಪೂರ್ವದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಲು ಹಾಗೂ ತರಬೇತಿ ನೀಡಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಆರ್ಟಿಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಹೇಮಾ ದಿವಾಕರ್‌ ತಿಳಿಸಿದರು.

ಮಧುಮೇಹ ಪತ್ತೆ ಮತ್ತು ನಿರ್ವಹಣೆ ಮಾಡಲು ವೈದ್ಯರಿಗೆ ತಾಂತ್ರಿಕ ಮಾರ್ಗದರ್ಶನ ನೀಡಲಾಗುತ್ತದೆ. ಆರೋಗ್ಯ ಸೇವಾ ಪೂರೈಕೆದಾರರಿಗೆ, ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ‘ಎಸ್‌75’ ಗ್ಲೂಕೋಸ್‌ ನೀಡಲಾಗುತ್ತದೆ. ಇದರಿಂದ ಮಧುಮೇಹ ಪ್ರಕರಣಗಳನ್ನು ನಿಯಂತ್ರಿಸಬಹುದು ಎಂದರು.

ADVERTISEMENT

ಸ್ತ್ರೀರೋಗ ತಜ್ಞೆ ಡಾ.ಸೀತಾ ಭತೇಜಾ, ‘ಮಧುಮೇಹವನ್ನು ವಾಸಿ ಮಾಡಲು ಸಾಧ್ಯವಿಲ್ಲ. ಜೀವನಶೈಲಿ ಬದಲಾವಣೆಯಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ತಾಯಂದಿರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.

*
ಸಾಕಷ್ಟು ಯುವತಿಯರು ಅಧಿಕ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಥ್ಯ ಹಾಗೂ ನಿಯಮಿತ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ದೂರ ಇಡಬಹುದು.
–ಡಾ.ಎಸ್‌. ಸ್ವರ್ಣಲತಾ, ಸಾಕ್ರ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.