ADVERTISEMENT

ಗಾಂಧಿನಗರದ ಲಾಡ್ಜ್ ಮೇಲೆ ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಬೆಂಗಳೂರು: ಗಾಂಧಿನಗರದ ಲಾಡ್ಜ್‌ವೊಂದರ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಅಕ್ರಮ ಬಂಧನದಲ್ಲಿದ್ದ ವಿವಿಧ ರಾಜ್ಯಗಳಿಗೆ ಸೇರಿದ  ಹತ್ತು ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರದ ಸೇಡಿಮನಿಯ ನವೀನ್ ಪ್ರಕಾಶ್ ಹೆಗ್ಗಡೆ (36) ಎಂಬಾತನನ್ನು ಬಂಧಿಸಿದ್ದಾರೆ.
 
ಪಂಜಾಬ್‌ನ ನೀತುಸಿಂಗ್ (25), ಮಧ್ಯಪ್ರದೇಶದ ಪ್ರಿಯಾ (24), ಬೆಂಗಳೂರಿನ ಯಲಹಂಕದ ನಾಜಿಯಾ (23), ಮಹಾರಾಷ್ಟ್ರದ ನೀಲಂ ಷಾಮ್ ಜಗದಾಳೆ (32), ಸಮೀರಾ (28), ಉತ್ತರಪ್ರದೇಶದ ಗುಡ್ಡಿದತ್ (26), ಪಿಂಕಿ (22), ಹೊಸದೆಹಲಿಯ ಮಂಜುಳಾದೇವಿ (25), ಪಶ್ಚಿಮ ಬಂಗಾಳದ ಷರೀಫಾ ಬೇಗಂ (27) ಮತ್ತು ಸ್ವಪ್ನಾ ದಾಸ್ ಅವರನ್ನು ಅಕ್ರಮ ಬಂಧನದಿಂದ ಬಿಡುಗಡೆಗೊಳಿಸಿದ್ದಾರೆ.

ಆರೋಪಿ  ನವೀನ್ ಪ್ರಕಾಶ್ ನಗರದ ಆರ್.ಟಿ ನಗರದ ಕೆಎಚ್‌ಬಿ ರಸ್ತೆಯಲ್ಲಿ ನೆಲೆಸಿದ್ದ. ಕೆಲಸ ಕೊಡಿಸುವುದಾಗಿ ಯುವತಿಯನ್ನು ಕರೆದುಕೊಂಡು ಬಂದಿದ್ದ ಆತ ಅವರನ್ನು ಬಾರ್‌ಗಳಲ್ಲಿ ಕೆಲಸಕ್ಕೆ ಸೇರಿದ್ದ. ಲಾಡ್ಜ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದ.

ಯುವತಿಯರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಆತ ಊರಿಗೆ ಹೋಗಲು ಬಿಡದೆ ಲಾಡ್ಜ್‌ನಲ್ಲಿ ಅಕ್ರಮವಾಗಿರಿಸಿಕೊಂಡಿದ್ದ. ವೇಶ್ಯಾವಾಟಿಕೆಯಲ್ಲಿ ತೊಡಗುವಂತೆಯೂ ಅವರನ್ನು ಒತ್ತಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಖಚಿತ ಮಾಹಿತಿ ಪಡೆದು ಲಾಡ್ಜ್ ಮೇಲೆ ದಾಳಿ ನಡೆಸಿ ಯುವತಿಯರನ್ನು ರಕ್ಷಿಸಲಾಯಿತು. ರಕ್ಷಿಸಿದವರನ್ನು ಅವರ ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಸಿಪಿ ಕೃಷ್ಣಂ ರಾಜು ಮತ್ತು ಎಸಿಪಿ ಎಸ್.ವೈ ಗುಳೇದ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಆನಂದ್ ಕಬ್ಬೂರಿ, ಕೆ.ಆರ್ ಭದ್ರಮ್ಮ ಅವರ ತಂಡ ಆರೋಪಿಯನ್ನು ಬಂಧಿಸಿದೆ.

ಎಂಜಿನಿಯರ್ ನಿಗೂಢ ಸಾವು: ಸಿವಿಲ್ ಎಂಜಿನಿಯರ್ ಲತೀಶ್ (30) ಎಂಬುವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಂದಿನಿಲೇಔಟ್‌ನ ಜೈಮಾರುತಿನಗರದಲ್ಲಿ ನಡೆದಿದೆ.ಮನೆಯಲ್ಲಿ ತಿಗಣೆ ಔಷಧಿ ಸಿಂಪಡಿಸಲಾಗಿದೆ.

ಪಾನಮತ್ತರಾದ ಲತೀಶ್ ಮನೆ ತುಂಬೆಲ್ಲ ತಿಗಣೆ ಔಷಧಿ ಸಿಂಪಡಿಸಿ ಕಿಟಕಿ- ಬಾಗಿಲು ಹಾಕಿಕೊಂಡು ಮಲಗಿದಾಗ ವಿಷ ಗಾಳಿ ಸೇವನೆಯಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ. ಲತೀಶ್ ಮೈಮೇಲೆ ಯಾವುದೇ ಗಾಯಗಳಿಲ್ಲ. ಮಲಗಿರುವ ಸ್ಥಿತಿಯಲ್ಲೇ  ಸಾವನ್ನಪ್ಪಿದ್ದಾರೆ ಎಂದು ನಂದಿನಿಲೇಔಟ್ ಪೊಲೀಸರು ತಿಳಿಸಿದ್ದಾರೆ.

ಚಿಕ್ಕಮಗಳೂರಿನ ಲತೀಶ್ ಅವರು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಕಲೇಶಪುರದ ಶ್ವೇತಾ ಎಂಬುವರನ್ನು ಅವರು ಪ್ರೀತಿಸಿ ವಿವಾಹವಾಗಿದ್ದರು. ಶ್ವೇತಾ ಅವರು ಭಾನುವಾರ ಊರಿಗೆ ಹೋಗಿದ್ದರು.
 ಬುಧವಾರ ರಾತ್ರಿ ಮನೆಗೆ ಬಂದ ಶ್ವೇತಾ ಅವರು ಬಾಗಿಲು ಬಡಿದರೂ  ಪ್ರತಿಕ್ರಿಯೆ ಬಂದಿಲ್ಲ.
 
ಮನೆಯ ಮಾಲೀಕರ ಮನೆಯಲ್ಲೇ ರಾತ್ರಿ ಮಲಗಿದ್ದ ಅವರು ಬೆಳಿಗ್ಗೆ ಎದ್ದು ಕಿಟಕಿ ಮೂಲಕ ಕೈ ಹಾಕಿ ಚಿಲಕ ತೆಗದು ಒಳಗೆ ಹೋಗಿ ನೋಡಿದಾಗ ಪತಿ ಸಾವನ್ನಪ್ಪಿದ್ದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.