ADVERTISEMENT

ಗಾಯಿತ್ರಿ ನಗರ: ತಾಯಿ ಮಗ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಬೆಂಗಳೂರು: ಆರ್ಥಿಕ ತೊಂದರೆ ಕಾರಣದಿಂದ ತಾಯಿ ಮತ್ತು ಮಗ ಒಟ್ಟಿಗೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಯತ್ರಿನಗರದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.

ಗಾಯತ್ರಿನಗರದ 5 ನೇ ಕ್ರಾಸ್‌ನ ವಿವೇಕಾನಂದ ಕಾನೂನು ಕಾಲೇಜು ಬಳಿಯ ಮನೆಯೊಂದರಲ್ಲಿ ಕಳೆದ 8 ವರ್ಷಗಳಿಂದ ವಾಸವಿದ್ದ ಪ್ರಶಾಂತ್ (32) ಹಾಗೂ ಸಿಂಧು (60) ಆತ್ಮಹತ್ಯೆ ಮಾಡಿಕೊಂಡವರು.
ಸಾಲ ಭಾದೆ ಹೆಚ್ಚಾದ ಕಾರಣ ಸಾವಿಗೆ ಶರಣಾಗುತ್ತಿರುವುದಾಗಿ ಪ್ರಶಾಂತ್ ಮರಣ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವಿವಾಹಿತ ಪ್ರಶಾಂತ್ ಮಲ್ಲೇಶ್ವರಂನಲ್ಲಿ ಟೈಲರ್ ಅಂಗಡಿಯೊಂದನ್ನು ನಡೆಸುತ್ತಿದ್ದರು. ಕಳೆದ 8 ತಿಂಗಳ ಹಿಂದೆ ಅವರ ತಂಗಿ ಪ್ರೀತಿ ಎಂಬುವರ ವಿವಾಹ ನಡೆದಿತ್ತು. ಇತ್ತೀಚೆಗೆ ಅವರು ಹೆಚ್ಚು ಸಮಯವನ್ನು ಮನೆಯೊಳಗೇ ಕಳೆಯುತ್ತಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಪ್ರೀತಿ ಸೋಮವಾರ ಬಹಳಷ್ಟು ಬಾರಿ ಪ್ರಶಾಂತ್ ಹಾಗೂ ಸಿಂಧು ಅವರ ಮೊಬೈಲ್‌ಗಳಿಗೆ ಕರೆ ಮಾಡಿದ್ದಾರೆ. ಆದರೆ ಅವರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿವೆ. ಸೋಮವಾರ ಸಂಜೆ ತನ್ನ ಗಂಡನೊಂದಿಗೆ ತಾಯಿಯ ಮನೆಗೆ ಬಂದಾಗ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡಿರುವುದು ತಿಳಿದು ಬಂದಿದೆ. ನಂತರ ಮನೆಯ ಮಾಲೀಕರಿಗೆ ತಿಳಿಸಲಾಗಿದೆ.

ಮನೆಯ ಮಾಲೀಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ಮನೆಯ ಬಾಗಿಲು ಒಡೆದು ನೋಡಿದಾಗ ಪ್ರಶಾಂತ್ ಹಾಗೂ ಸಿಂಧು ಒಂದೇ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಅವರು ಬಹಳಷ್ಟು ಸಾಲ ಮಾಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.