ADVERTISEMENT

ಗುಂಡು ಹಾರಿಸಿಕೊಂಡು ಸಹ ನಿರ್ಮಾಪಕನ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಮೇ 2012, 19:30 IST
Last Updated 27 ಮೇ 2012, 19:30 IST

ಬೆಂಗಳೂರು: ಚಲನಚಿತ್ರ ಸಹನಿರ್ಮಾಪಕರೊಬ್ಬರು ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಲಕ್ಷ್ಮೀಪುರದಲ್ಲಿ ಶನಿವಾರ ರಾತ್ರಿ ನಡೆದಿದೆ.ರಿಯಲ್ ಎಸ್ಟೇಟ್ ಉದ್ಯಮಿಯಾದ ಶ್ರೀನಿವಾಸ್ (42) ಆತ್ಮಹತ್ಯೆ ಮಾಡಿಕೊಂಡವರು. `

ವೀರಪ್ಪನ್ ಅಟ್ಟಹಾಸ~, `ಸಂತೋಷ~ ಎಂಬ ಕನ್ನಡ ಸಿನಿಮಾಗಳಲ್ಲಿ ಸಹನಿರ್ಮಾಪಕರಾಗಿ ಕೆಲಸ ಮಾಡಿದ್ದ ಅವರು, ಕುಟುಂಬ ಸದಸ್ಯರೊಂದಿಗೆ ರಾಜಾಜಿನಗರ ಸಮೀಪದ ಮಹಾಗಣಪತಿನಗರದಲ್ಲಿ ವಾಸಿಸುತ್ತಿದ್ದರು.
ಹನ್ನೆರಡು ವರ್ಷಗಳ ಹಿಂದೆ ರೇಖಾ ಎಂಬುವರನ್ನು ವಿವಾಹವಾಗಿದ್ದ ಶ್ರೀನಿವಾಸ್‌ಗೆ ಸಂಜನಾ (9) ಹಾಗೂ ಶಾಲಿನಿ (5) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಮೈಸೂರಿಗೆ ಹೋಗುತ್ತೇನೆ ಎಂದು ಹೇಳಿ ರಿವಾಲ್ವರ್ ತೆಗೆದುಕೊಂಡು ಹೋದ ಅವರು, ನಾಗರಬಾವಿಯಲ್ಲಿರುವ ತನ್ನ ಸಹೋದರಿ ಮಂಜುಳಾ  ಮನೆಗೆ ಹೋಗಿದ್ದರು. ನಂತರ ತನ್ನ ಸ್ನೇಹಿತರಾದ ಜಗದೀಶ್ ಮತ್ತು ಬಾಬು ಎಂಬುವರಿಗೆ ಕರೆ ಮಾಡಿ ಲಕ್ಷ್ಮೀಪುರದಲ್ಲಿರುವ ತಮ್ಮ ತೋಟದ ಬಳಿ ಬರುವಂತೆ ಹೇಳಿದ್ದರು.

`ಸ್ಥಳಕ್ಕೆ ಹೋಗಿ ಶ್ರೀನಿವಾಸ್‌ಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆದರೆ ಅವರ ಕಾರು ರಸ್ತೆ ಬದಿಯಲ್ಲೇ ಇದ್ದುದರಿಂದ ತೋಟದೊಳಗೆ ಹೋಗೆ ಹುಡುಕಾಟ ನಡೆಸಿದೆವು. ನಂತರ ಶವವಾಗಿ ಕಾಣಿಸಿಕೊಂಡರು. ಅವರ ಪಕ್ಕದಲ್ಲೇ ರಿವಾಲ್ವರ್ ಬಿದ್ದಿತ್ತು~ ಎಂದು ಅವರ ಸ್ನೇಹಿತ ಜಗದೀಶ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

`ಎರಡು ವರ್ಷಗಳಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಮನೆಯಲ್ಲಿ ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಬೇರೆ ನಗರಗಳಿಗೆ ಹೋಗುವಾಗ ರಿವಾಲ್ವರ್ ತೆಗೆದುಕೊಂಡು ಹೋಗುತ್ತಿದ್ದರು~ಎಂದು ಪತ್ನಿ ರೇಖಾ ಹೇಳಿದ್ದಾರೆ.
`ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ನಡೆಸಿ ಇದು ಆತ್ಮಹತ್ಯೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ತನಿಖೆ ನಂತರ ಆತ್ಮಹತ್ಯೆಗೆ ಕಾರಣ ತಿಳಿಯಲಿದೆ~ ಎಂದು ರಾಮನಗರ ಜಿಲ್ಲಾ ಎಸ್‌ಪಿ ಅನುಪಮ್ ಅಗರ್‌ವಾಲ್ ತಿಳಿಸಿದರು.

 ಶ್ರೀನಿವಾಸ್ ಬಳಿ ಪರವಾನಗಿ ಪಡೆದ ರಿವಾಲ್ವರ್ ಇತ್ತು. ಅದೇ ರಿವಾಲ್ವರ್‌ನಿಂದಲೇ ತಲೆ ಬಲ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ತಾವರೆಕೆರೆ ಠಾಣೆ ಪೊಲೀಸರು ಮಾಹಿತಿ ನೀಡಿದರು. ಪ್ರಕರಣ ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.