ADVERTISEMENT

ಗುಂಡು ಹಾರಿಸಿ ಭಾವನ ಕೊಲೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಹೋದರರು ತಂಗಿಯ ಪತಿ (ಭಾವ)ಯ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಮೈಕೊಲೇಔಟ್ ಸಮೀಪದ ಬಿಸ್ಮಿಲ್ಲಾ ನಗರದಲ್ಲಿ ಶುಕ್ರವಾರ ನಡೆದಿದೆ.

ಬಿಸ್ಮಿಲ್ಲಾ ನಗರ ಎರಡನೇ ಅಡ್ಡರಸ್ತೆ ನಿವಾಸಿ ಜೆಮ್‌ಶೆಡ್ ಷರೀಫ್ (37) ಕೊಲೆಯಾದವರು. ಅವರ ಪತ್ನಿಯ ಸಹೋದರ ಆರೋಪಿ ಅಸ್ಲಂ ಷರೀಫ್ (38) ಎಂಬಾತನನ್ನು ಬಂಧಿಸಲಾಗಿದೆ. ಆತನ ಸಹೋದರರಾದ ಅಮ್ಜದ್ ಷರೀಫ್ ಮತ್ತು ಅಕ್ರಮ್ ಷರೀಫ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಿ ವ್ಯಾಪಾರಿಯಾದ ಜೆಮ್‌ಶೆಡ್, ಅಸ್ಲಂನ ಸಹೋದರಿ ಆಸ್ಮಾ ಬಾನು ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆಸ್ಮಾ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಬೇಸರಗೊಂಡಿದ್ದ ಆಸ್ಮಾ, ಪತಿಯಿಂದ ದೂರವಾಗಿ ಎರಡು ತಿಂಗಳುಗಳಿಂದ ತವರು ಮನೆಯಲ್ಲೇ ನೆಲೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಸ್ಲಂ ಸಹೋದರರು ಶುಕ್ರವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಜೆಮ್‌ಶೆಡ್ ಅವರ ಮನೆಯ ಬಳಿ ಬಂದು ಸಹೋದರಿಯ ಜತೆ ಜಗಳವಾಡದೆ ಸಂಸಾರ ನಡೆಸಿಕೊಂಡು ಹೋಗುವಂತೆ ಬುದ್ಧಿ ಮಾತು ಹೇಳಿದರು. ಈ ವೇಳೆ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು, ಅಸ್ಲಂ ತನ್ನ ಪಿಸ್ತೂಲ್‌ನಿಂದ ಜೆಮ್‌ಶೆಡ್ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ.

 ಅದರಲ್ಲಿ ಒಂದು ಗುಂಡು ಜೆಮ್‌ಶೆಡ್ ಎದೆಗೆ ತಗುಲಿ ತೀವ್ರವಾಗಿ ಗಾಯಗೊಂಡರು. ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಶನಿವಾರ ಬೆಳಗಿನ ಜಾವ ಅವರು ಮೃತಪಟ್ಟರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗುರಪ್ಪನಪಾಳ್ಯ ನಿವಾಸಿಗಳಾದ ಅಮ್ಜದ್ ಮತ್ತು ಸಹೋದರರು ಗುಜರಿ ವ್ಯಾಪಾರಿಗಳು. ಅಸ್ಲಂ ಪರವಾನಗಿ ಪಡೆದು ಪಿಸ್ತೂಲ್ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT