ADVERTISEMENT

ಗುತ್ತಿಗೆದಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ವಸತಿ ಸಚಿವ ಎಂ.ಕೃಷ್ಣಪ್ಪ ಹಾಗೂ ಜಗದೀಶ ಶೆಟ್ಟರ್‌ ಮಾತುಕತೆ ನಡೆಸಿದರು. ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ಹಾಗೂ ಕೆಂಪಣ್ಣ ಇದ್ದರು –ಪ್ರಜಾವಾಣಿ ಚಿತ್ರ
ವಸತಿ ಸಚಿವ ಎಂ.ಕೃಷ್ಣಪ್ಪ ಹಾಗೂ ಜಗದೀಶ ಶೆಟ್ಟರ್‌ ಮಾತುಕತೆ ನಡೆಸಿದರು. ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ಹಾಗೂ ಕೆಂಪಣ್ಣ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: 'ಸಕಾಲದಲ್ಲಿ ಕೆಲಸಗಳನ್ನು ಮಾಡಿ ಮುಗಿಸಿದರೂ ಹಣ ಪಾವತಿಯಾಗದೆ ಸಮಸ್ಯೆಗೆ ಸಿಲುಕಿರುವ ಗುತ್ತಿಗೆದಾರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸಬೇಕು' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಒತ್ತಾಯಿಸಿದರು.

ರಾಜ್ಯ ಗುತ್ತಿಗೆದಾರರ ಸಂಘ ನಗರದಲ್ಲಿ ಬುಧವಾರ ಆಯೋಜಿಸಿದ್ದ ಗುತ್ತಿಗೆದಾರರ ರಾಜ್ಯ ಮಟ್ಟದ ಸಮಾವೇಶದ ಸಮಾರೋಪದಲ್ಲಿ ಅವರು ಮಾತನಾಡಿದರು.

'ಕಾಮಗಾರಿ ಪೂರ್ಣಗೊಳಿಸಿ ನಾಲ್ಕೈದು ತಿಂಗಳಾದರೂ ಹಣ ಸಿಗದೆ ಗುತ್ತಿಗೆದಾರರು ಸಮಸ್ಯೆಯಲ್ಲಿದ್ದಾರೆ. ಹಿರಿತನದ ಆಧಾರದ ಮೇಲೆ ಹಣ ಬಿಡುಗಡೆ ಮಾಡುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಸಾಲ ತಂದು ಬಂಡವಾಳ ಹಾಕಿ ಕೆಲಸ ಮಾಡಿದವರು ಇದರಿಂದ ಸಮಸ್ಯೆಗೆ ಸಿಲುಕುತ್ತಾರೆ. ಜತೆಗೆ ರಾಜಕಾರಣಿಗಳ ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಗುಣಮಟ್ಟದ ಕಾಮಗಾರಿಗಳು ನಡೆಯಬೇಕಾದರೆ ಗುತ್ತಿಗೆದಾರರನ್ನು ಇಂಥ ಸಮಸ್ಯೆಗಳಿಂದ ಮುಕ್ತಗೊಳಿಸಬೇಕು' ಎಂದರು.

ADVERTISEMENT

ವಸತಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ, 'ಗುತ್ತಿಗೆದಾರರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಗುತ್ತಿಗೆದಾರರ ಮೇಲಿನ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು' ಎಂದರು.

ಮೇಯರ್ ಆರ್.ಸಂಪತ್‍ರಾಜ್ ಮಾತನಾಡಿ, 'ಬಿಬಿಎಂಪಿ ಮುಖ್ಯ ಕಚೇರಿಯ ಆವರಣದಲ್ಲಿ ಗುತ್ತಿಗೆದಾರರ ಸಂಘಕ್ಕೆ ಜಾಗ ನೀಡಲು ಪಾಲಿಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತೇವೆ' ಎಂದು ಭರವಸೆ ನೀಡಿದರು.

‘ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಮುಖ್ಯಮಂತ್ರಿ ಆದೇಶದ ಮೇರೆಗೆ ಗುರುವಾರ ಬ್ಯಾಂಕರ್‍ಗಳ ಸಭೆ ಕರೆಯಲಾಗಿದೆ. ಬ್ಯಾಂಕರ್‍ಗಳಿಗೆ ಪಾಲಿಕೆಯಿಂದ ಖಾತ್ರಿ ಒದಗಿಸಿ, ಸಾಲ ಪಡೆದು ಗುತ್ತಿಗೆದಾರರ ಬಾಕಿಯನ್ನು ಒಂದು ವಾರದಲ್ಲಿ ಪಾವತಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.