
ಬೆಂಗಳೂರು: ಭೌತವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರ ಸಾಮಾನ್ಯ ಸಾಪೇಕ್ಷ ಸಿದ್ಧಾಂತದ ಗುರುತ್ವ ಮಸೂರ ಪ್ರಯೋಗಕ್ಕೆ (ಗ್ರಾವಿಟೇಷನಲ್ ಲೆನ್ಸಿಂಗ್) ಬುಧವಾರ ನೂರು ವರ್ಷ ತುಂಬಿತು. ನಗರದ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಈ ಸಂಭ್ರಮವನ್ನು ಆಚರಿಸಲಾಯಿತು.
ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಥಿಯರಿಟಿಕಲ್ ಸೈನ್ಸ್‌ನ (ಐಸಿಟಿಎಸ್) ಹಿರಿಯ ಪ್ರಾಧ್ಯಾಪಕ ಪರಮೇಶ್ವರನ್ ಅಜಿತ್ ಅವರು ಸಾಪೇಕ್ಷ ಸಿದ್ಧಾಂತದ ಕುರಿತು ಉಪನ್ಯಾಸ ನೀಡಿದರು.
‘1919ರಲ್ಲಿಐನ್‌ಸ್ಟೀನ್ ಅವರ ಈ ಪ್ರಯೋಗ ಪರೀಕ್ಷೆಗೆ ಒಳಪಟ್ಟಿತು.ನಕ್ಷತ್ರಗಳ ಬೆಳಕಿನ ಕಿರಣಗಳು ಬಲಿಷ್ಠವಾದ ಗುರುತ್ವದಲ್ಲಿ ಹಾದುಹೋಗುವ ಬಾಗುತ್ತವೆ ಎಂಬುದನ್ನು ಪ್ರಯೋಗ ಸಾಬೀತುಪಡಿಸಿತ್ತು. ಆದರೆ, ವಿಜ್ಞಾನಿಗಳು ಸೇರಿದಂತೆ ಅನೇಕರಿಗೆ ಈ ಸಿದ್ಧಾಂತ ಅರ್ಥವೇ ಆಗಿರಲಿಲ್ಲ’ ಎಂದು ಅಜಿತ್ ತಿಳಿಸಿದರು.
‘ವಿಜ್ಞಾನಿ ಆರ್ಥರ್ ಎಡ್ಡಿಂಗ್‌ಟನ್ ಅವರು ಗೊಂದಲದಲ್ಲಿದ್ದ ವಿಜ್ಞಾನಿಗಳಿಗೆ ಸಿದ್ಧಾಂತವನ್ನು ಮನದಟ್ಟು ಮಾಡುವ ಸಲುವಾಗಿ ಈ ಪ್ರಯೋಗವನ್ನು ಮತ್ತೊಮ್ಮೆ ನಿರೂಪಿಸಿದರು. ಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಗುರುತ್ವ ಕ್ಷೇತ್ರದಲ್ಲಿ ಸೂರ್ಯನ ಹಿಂಭಾಗದ ನಕ್ಷತ್ರಗಳ ಬೆಳಕು ಬಾಗುವುದನ್ನು ಅವರು ಜಗತ್ತಿನ ಮುಂದೆ ಚಿತ್ರಗಳ ಸಹಿತ ನಿರೂಪಿಸಿದ್ದರು.ಆಗ ಎಲ್ಲರಿಗೂ ಅರ್ಥವಾಯಿತು. ಅದೇ ರೀತಿ ತರಂಗಗಳೂ ಬಾಗುತ್ತವೆ ಎಂಬುದನ್ನೂ ಅವರು ತಿಳಿಸಿದ್ದರು’ ಎಂದು ಹೇಳಿದರು.
‘ಎಡ್ಡಿಂಗ್‌ಟನ್ ಈ ಸಿದ್ಧಾಂತವನ್ನು ನಿರೂಪಿಸಿದ ಸುದ್ದಿ ಕೊಲ್ಕತ್ತದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ವಿಜ್ಞಾನಿಗಳು ಅವರನ್ನು ಎರಡನೇ ಐನ್‌ಸ್ಟೀನ್ ಎಂದೇ ಕರೆದರು. ಈ ಸಿದ್ಧಾಂತದ ಆಧಾರದಲ್ಲೇ ಜಿಪಿಎಸ್ ಮೂಲಕ ಗೂಗಲ್ ಮ್ಯಾಪ್ ಬಳಕೆ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.