ADVERTISEMENT

ಗುಹಾ ವಿರುದ್ಧ ಬಿಜೆಪಿ ದೂರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 20:23 IST
Last Updated 10 ಅಕ್ಟೋಬರ್ 2017, 20:23 IST

ಬೆಂಗಳೂರು: ‘ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸಂಘ ಪರಿವಾರದವರೇ ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವ ಹಿರಿಯ ಲೇಖಕ ರಾಮಚಂದ್ರ ಗುಹಾ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಸದಸ್ಯರು ಮಲ್ಲೇಶ್ವರ ಠಾಣೆಗೆ ಮಂಗಳವಾರ ದೂರು ಕೊಟ್ಟಿದ್ದಾರೆ.

‘ಗೌರಿ ಲಂಕೇಶ್ ಹತ್ಯೆ ಬಗ್ಗೆ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಗುಹಾ, ‘ವಿಚಾರವಾದಿಗಳಾದ ದಾಭೋಲ್ಕರ್, ಪಾನ್ಸರೆ ಹಾಗೂ ಕಲಬುರ್ಗಿ ಅವರನ್ನು ಕೊಂದ ಸಂಘ ಪರಿವಾರದವರೇ ಗೌರಿ ಅವರನ್ನೂ ಹತ್ಯೆಗೈದಿದ್ದಾರೆ’ ಎಂದು ಹೇಳಿದ್ದರು. ಈ ಎಲ್ಲ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ. ಹೀಗಿರುವಾಗ, ಸಂಘ ಪರಿವಾರದವರ ಮೇಲೆ ಆರೋಪ ಮಾಡುವ ಮೂಲಕ ಗುಹಾ ನಮಗೆ ಅವಮಾನ ಮಾಡಿದ್ದಾರೆ’ ಎಂದು ಬಿಜೆಪಿ ಸದಸ್ಯರು ದೂರಿದ್ದಾರೆ.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಜಗತ್ತಿನಲ್ಲೇ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿದೆ. ಇಂಥ ಪ್ರತಿಷ್ಠಿತ ಸಂಘಟನೆಯ ಪ್ರತಿಷ್ಠೆಗೆ ಮಸಿ ಬಳಿಯಲು ಗುಹಾ ಪ್ರಯತ್ನಿಸಿದ್ದಾರೆ. ಅವರ ಹೇಳಿಕೆ ನಮ್ಮ ಭಾವನೆಗಳಿಗೂ ಧಕ್ಕೆ ಉಂಟು ಮಾಡಿದೆ. ಈ ಕುರಿತು ಸಾರ್ವಜನಿಕವಾಗಿ ಕ್ಷಮೆ ಯಾಚಿಸುವಂತೆ ವಕೀಲರ ಮೂಲಕ ಅವರಿಗೆ ನೋಟಿಸ್ ಸಹ ಕಳುಹಿಸಿದ್ದೆವು. ಆದರೆ, ಈವರೆಗೂ ನೋಟಿಸ್‌ಗೆ ಸ್ಪಂದಿಸಿಲ್ಲ’ ಎಂದು ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ಬಿಜೆಪಿ ಕಾರ್ಯಕರ್ತರು ಆರು ಪುಟಗಳ ದೂರು ಕೊಟ್ಟಿದ್ದಾರೆ. ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಮಲ್ಲೇಶ್ವರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.