ADVERTISEMENT

ಗೃಹಬಂಧನ ಪ್ರಕರಣ: ಆಂಧ್ರ ಶಾಸಕ, ಪುತ್ರನ ವಿರುದ್ಧ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

ಬೆಂಗಳೂರು:  ಭೂ ವಿವಾದದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಗೃಹ ಬಂಧನದಲ್ಲಿಟ್ಟು ಪಿಸ್ತೂಲ್‌ನಿಂದ ಪ್ರಾಣ ಬೆದರಿಕೆ ಹಾಕಿದ ಆರೋಪದ ಮೇಲೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಬನಗಾನಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಕಾತಸಾನಿ ರಾಮಿರೆಡ್ಡಿ ಮತ್ತು ಅವರ ಪುತ್ರನ ವಿರುದ್ಧ ನಗರದ ಕೆ.ಆರ್. ಪುರ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ಇಂದಿರಾನಗರದಲ್ಲಿ ವಾಸವಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ ಭಾಸ್ಕರ್‌ರೆಡ್ಡಿ ಮತ್ತು ಶಾಸಕ ರಾಮಿರೆಡ್ಡಿ ನಡುವೆ ಹೂಡಿ ಬಳಿಯ ಜಮೀನು ಒಂದರ ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ವಿವಾದ ಬಗೆಹರಿಸಿಕೊಳ್ಳುವ ಸೋಗಿನಲ್ಲಿ ರಾಮಿರೆಡ್ಡಿ ಮತ್ತು ಬೆಂಬಲಿಗರು, ಭಾಸ್ಕರ್‌ರೆಡ್ಡಿ ಅವರನ್ನು ಸೋಮವಾರ ದೇವಸಂದ್ರದ ಅಪಾರ್ಟ್‌ಮೆಂಟ್ ಒಂದಕ್ಕೆ ಕರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ಗೆ ಹೋಗಿದ್ದ ಭಾಸ್ಕರ್‌ರೆಡ್ಡಿ ಅವರಿಗೆ ರಾಮಿರೆಡ್ಡಿ ಪಿಸ್ತೂಲ್ ತೋರಿಸಿ ಖಾಲಿ ಛಾಪಾ ಕಾಗದಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಿದ್ದಾರೆ. ಅವರು ಸಹಿ ಹಾಕಲು ನಿರಾಕರಿಸಿದಾಗಿ ಹಲ್ಲೆ ಮಾಡಿ ಕೊಲ್ಲುವುದಾಗಿ ಹೆದರಿಸಿ ಸಹಿ ಮಾಡಿಸಿಕೊಂಡಿದ್ದಾರೆ. ನಂತರ ರಾತ್ರಿ ಏಳು ಗಂಟೆ ಸುಮಾರಿಗೆ ಅವರನ್ನು ಅಪಾರ್ಟ್‌ಮೆಂಟ್‌ನಿಂದ ಬಿಟ್ಟು ಕಳುಹಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಭಾಸ್ಕರ್‌ರೆಡ್ಡಿ ಮಂಗಳವಾರ ಸಂಜೆ ದೂರು ನೀಡಿದರು.
 
ಈ ದೂರಿನ ಹಿನ್ನೆಲೆಯಲ್ಲಿ ರಾಮಿರೆಡ್ಡಿ, ಅವರ ಪುತ್ರ ಮಸ್ತಾನ್ ರೆಡ್ಡಿ, ಬೆಂಬಲಿಗರಾದ ಕಾಶಿ ರೆಡ್ಡಿ, ಎಂ.ವೆಂಕಟ ರೆಡ್ಡಿ, ಮನೋಹರ್ ರೆಡ್ಡಿ ಮತ್ತು ಆರ್.ವೆಂಕಟ ರೆಡ್ಡಿ ಎಂಬುವರ ವಿರುದ್ಧ ಹಲ್ಲೆ, ಕೊಲೆ ಬೆದರಿಕೆ ಆರೋಪದ ಮೇಲೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳೆಲ್ಲ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಪ್ರಕರಣ: ಬಂಧನ
ಹೊಂಗಸಂದ್ರದ ಗಾರ್ವೆಬಾವಿಪಾಳ್ಯದಲ್ಲಿ ನಡೆದಿದ್ದ ವೀರೇಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಸ್ಕಾಂ ಉದ್ಯೋಗಿಯಾಗಿದ್ದ ವೀರೇಶ್, ಪತ್ನಿ ಮಂಜುಳಾ ಜತೆ ಗಾರ್ವೆಬಾವಿಪಾಳ್ಯದಲ್ಲಿ ವಾಸವಾಗಿದ್ದರು. ಮಂಜುಳಾ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅದೇ ಸಿದ್ಧ ಉಡುಪು ಕಾರ್ಖಾನೆಯಲ್ಲೆ ಕೆಲಸ ಮಾಡುತ್ತಿದ್ದ ರಾಜುವಿನ ಜತೆ ಮಂಜುಳಾಗೆ ಪರಿಚಯವಾಗಿತ್ತು. ಅವರ ಸ್ನೇಹ ಪ್ರೇಮಕ್ಕೆ ತಿರುಗಿ ರಾಜು ಆಕೆಯನ್ನು ವಿವಾಹವಾಗಲು ನಿರ್ಧರಿಸಿದ್ದನು.

ಅದಕ್ಕಾಗಿ ಜೂ 7 ರಂದು ವೀರೇಶ್‌ರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ವಿಚಾರಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ರಾಜುವನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.