ADVERTISEMENT

ಗೆಲುವಿಗೆ ಪಣ: ಸಿ.ಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 20:18 IST
Last Updated 4 ಆಗಸ್ಟ್ 2013, 20:18 IST

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪಣತೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು, ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು ಹಾಗೂ ಶಾಸಕರೊಂದಿಗೆ ಭಾನುವಾರ ಇಲ್ಲಿ ಸಮಾಲೋಚನೆ ನಡೆಸಿದ ಅವರು, ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಸೂಚಿಸಿದರು.

ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಒಬ್ಬ ಶಾಸಕರು ಹಾಗೂ ವಿಧಾನಸಭಾ ಕ್ಷೇತ್ರಕ್ಕೆ ಸಚಿವರೊಬ್ಬರನ್ನು ನಿಯೋಜಿಸಲಾಗುವುದು. ಪ್ರಚಾರ ಕಾರ್ಯ ಅಂತ್ಯಗೊಳ್ಳುವವರೆಗೂ ಕ್ಷೇತ್ರದಲ್ಲೇ ಬಿಡಾರ ಹೂಡುವ ಮೂಲಕ ಪ್ರಚಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಿದರು ಎನ್ನಲಾಗಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ, ಆನೇಕಲ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವಹಿಸಲಾಗಿದೆ. ಇದೇ ರೀತಿ ಬೇರೆ ಬೇರೆ ಕ್ಷೇತ್ರಗಳ ಉಸ್ತುವಾರಿಯನ್ನು ಸಚಿವರು, ಶಾಸಕರಿಗೆ ವಹಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಗೆಲುವಿನ ತಂತ್ರಗಳ ಬಗ್ಗೆ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ.

ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಡಿ.ಕೆ.ಶಿವಕುಮಾರ್, ಎಸ್.ಟಿ.ಸೋಮಶೇಖರ್, ಎಂ.ಆರ್. ಸೀತಾರಾಂ, ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸೇರಿದಂತೆ ನಗರದ ಶಾಸಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.