ADVERTISEMENT

ಗೋದಾಮಿಗೆ ಬೆಂಕಿ: ರೂ 50 ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 27 ಮೇ 2014, 19:52 IST
Last Updated 27 ಮೇ 2014, 19:52 IST
ಪೀಣ್ಯ ಮೂರನೇ ಹಂತದ ಲಗ್ಗೆರೆ ಮುಖ್ಯರಸ್ತೆಯಲ್ಲಿ ಗುಜರಿ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಸೋಮವಾರ ರಾತ್ರಿ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು	– ಪ್ರಜಾವಾಣಿ ಚಿತ್ರ
ಪೀಣ್ಯ ಮೂರನೇ ಹಂತದ ಲಗ್ಗೆರೆ ಮುಖ್ಯರಸ್ತೆಯಲ್ಲಿ ಗುಜರಿ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಸೋಮವಾರ ರಾತ್ರಿ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಪೀಣ್ಯ ಮೂರನೇ ಹಂತದ ಲಗ್ಗೆರೆ ಮುಖ್ಯರಸ್ತೆಯಲ್ಲಿರುವ ಗುಜರಿ ವಸ್ತುಗಳ ಗೋದಾಮಿಗೆ ಸೋಮವಾರ ರಾತ್ರಿ ಬೆಂಕಿ ಹೊತ್ತಿಕೊಂಡು ಸುಮಾರು ರೂ.  50 ಲಕ್ಷ ಮೌಲ್ಯದ ವಸ್ತುಗಳು ಆಹುತಿಯಾಗಿವೆ.

ಲಗ್ಗೆರೆ ಮುಖ್ಯರಸ್ತೆಯಲ್ಲಿರುವ ‘ರಾವ್‌ ಟ್ರೇಡರ್ಸ್‌್’ ಎಂಬ ಗೋದಾಮಿನಲ್ಲಿ ರಾತ್ರಿ 12.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಗೋದಾಮಿನಿಂದ ದಟ್ಟ ಹೊಗೆ ಬರುತ್ತಿರುವುದನ್ನು ಕಂಡ ಪಕ್ಕದ ಕಾರ್ಖಾನೆಯ ಕ್ರಿಸ್ಟನ್‌ ಎಂಬುವರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದರು. ಕೂಡಲೇ 13 ವಾಹನಗಳಲ್ಲಿ ಸ್ಥಳಕ್ಕೆ ತೆರಳಿದ 40 ಮಂದಿ ಸಿಬ್ಬಂದಿ, 12 ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

‘ಇಡೀ ಗೋದಾಮಿನಲ್ಲಿ ಗುಜರಿ ವಸ್ತುಗಳನ್ನು ತುಂಬಿದ್ದರಿಂದ ಬೆಂಕಿಯ ತೀವ್ರತೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿತ್ತು. ದಟ್ಟ ಹೊಗೆ ತುಂಬಿದ್ದರಿಂದ ಒಳ ಹೋಗುವುದಕ್ಕೆಯೇ ಹರಸಾಹಸ ಪಡಬೇಕಾ­ಯಿತು. ನಂತರ ಜೆಸಿಬಿ ಯಂತ್ರದ ಮೂಲಕ ಕಟ್ಟಡದ ಗೋಡೆಗಳನ್ನು ಕೆಡವಿಸಿ, ಬೆಂಕಿ ನಂದಿಸಲು ಆರಂಭಿಸಿದೆವು’ ಎಂದು ಪಶ್ಚಿಮ ವಿಭಾಗದ ಪ್ರಾದೇಶಿಕ ಅಗ್ನಿಶಾಮಕಾಧಿಕಾರಿ ರವಿಶಂಕರ್ ‘ಪ್ರಜಾವಾಣಿ’ ಗೆ ತಿಳಿಸಿದರು.

‘ಈ ಹಂತದಲ್ಲಿ ನೀರಿನ ಕೊರತೆ ಉಂಟಾಗಿ­ದ್ದರಿಂದ ಕಾರ್ಯಾಚರಣೆಗೆ ತೊಡಕಾಯಿತು. ನಂತರ ಸಮೀಪದ ಪ್ಯಾರಗಾನ್‌ ಮತ್ತು ಎಬಿಬಿ ಕಾರ್ಖಾನೆಗಳ ಮಾಲೀಕರು ನೀರು ಪೂರೈಕೆ ಮಾಡಿದರು. ಅಂತಿಮವಾಗಿ ಮಂಗಳವಾರ ಮಧ್ಯಾಹ್ನ 12.30ಕ್ಕೆ ಕಾರ್ಯಾಚರಣೆ ಪೂರ್ಣಗೊಂಡಿತು. ವಿವಿಧ ಮಾದರಿಯ ಯಂತ್ರಗಳು, ಪೀಠೋಪಕರಣಗಳು ಸೇರಿದಂತೆ ಸುಮಾರು ರೂ. 50 ಲಕ್ಷ ಮೌಲ್ಯದ ವಸ್ತುಗಳ ಸುಟ್ಟು ಹೋಗಿರುವುದಾಗಿ ಮಾಲೀಕರು ಹೇಳಿದ್ದಾರೆ. ಕಟ್ಟಡದ ಸುರಕ್ಷತೆಗೆ ಕೈಗೊಂಡಿದ್ದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದು ಹೇಳಿದರು.

‘ಪಕ್ಕದ ಕಾರ್ಖಾನೆಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದೆ. ಈ ವೇಳೆ ಗೋದಾಮಿನ ಒಳಭಾಗದಿಂದ ದಟ್ಟ ಹೊಗೆ ಬರುತ್ತಿತ್ತು. ಒಳಗೆ ಮಲಗಿದ್ದ 40 ಕಾರ್ಮಿಕರನ್ನು ಕೂಡಲೇ  ಎಚ್ಚರಿಸಿ ಹೊರಗೆ ಬರುವಂತೆ ಸೂಚಿಸಿದೆ. ನಂತರ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದೆ’ ಎಂದು ಕ್ರಿಸ್ಟನ್‌ ಹೇಳಿದರು.

ವರದಿ ನಂತರ ಕ್ರಮ
‘ಗೋದಾಮು ಶ್ರೀಧರ್‌ ರಾವ್‌ ಮತ್ತು ಶ್ರೀನಾಥ್‌ ರಾವ್‌ ಎಂಬ ಸೋದರರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಶಾರ್ಟ್‌ ಸರ್ಕಿಟ್‌ನಿಂದ ಈ ಅವಘಢ ಸಂಭವಿಸಿರುವ ಸಾಧ್ಯತೆ ಬಗ್ಗೆ ಅಗ್ನಿ­ಶಾಮಕ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿ­ದ್ದಾರೆ. ಆದರೆ, ಅಗ್ನಿಶಾಮಕ ಮತ್ತು ತುರ್ತು ಸೇವೆ­ಗಳ ಇಲಾಖೆಯಿಂದಾಗಲಿ, ಬೆಸ್ಕಾಂ ಸಿಬ್ಬಂದಿ­ಯಾಗಲಿ ಈವರೆಗೂ ಯಾವುದೇ ವರದಿ ಬಂದಿಲ್ಲ. ಅವರು ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜಗೋಪಾಲನಗರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.