ADVERTISEMENT

ಗೋದಾಮಿಗೆ ಬೆಂಕಿ: ಹಾನಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 20:05 IST
Last Updated 20 ಏಪ್ರಿಲ್ 2013, 20:05 IST

ಬೆಂಗಳೂರು: ಸಿಟಿ ಮಾರುಕಟ್ಟೆ ಬಳಿಯ ಜಾಲಿ ಮೊಹಲ್ಲಾದಲ್ಲಿ ಬ್ಲೀಚಿಂಗ್ ಪುಡಿ ದಾಸ್ತಾನು ಮಾಡಿದ್ದ ಗೋದಾಮು ಒಂದರಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಬ್ಲೀಚಿಂಗ್ ಪುಡಿ ಮತ್ತು ರಾಸಾಯನಿಕ ವಸ್ತುಗಳ ವ್ಯಾಪಾರಿಯಾದ ಪಟೇಲ್ ಎಂಬುವರು ಜಾಲಿ ಮೊಹಲ್ಲಾದ  ರಾಮಯ್ಯ ರಸ್ತೆಯ ಗೋದಾಮಿನಲ್ಲಿ ಬ್ಲೀಚಿಂಗ್ ಪುಡಿ ದಾಸ್ತಾನು ಮಾಡಿದ್ದರು. ಆ ಗೋದಾಮಿನ ಒಳ ಭಾಗದಲ್ಲಿ ಮಧ್ಯಾಹ್ನ 12.50ರ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಇದನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು.

ಎರಡು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅರ್ಧ ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಸುಮಾರು ್ಙ ಮೂರು ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಬ್ಲೀಚಿಂಗ್ ಪುಡಿ ತಯಾರಿಕೆಯಲ್ಲಿ ಸೋಡಿಯಂ ಹೈಪೊ ಕ್ಲೋರೈಟ್ ಮತ್ತು ಕ್ಯಾಲ್ಸಿಯಂ ಆಕ್ಸಿ ಕ್ಲೋರೈಡ್ ಎಂಬ ರಾಸಾಯನಿಕ ವಸ್ತುಗಳನ್ನು ಬಳಸಲಾಗಿರುತ್ತದೆ.

ಆ ರಾಸಾಯನಿಕ ವಸ್ತುಗಳು ವಾತಾವರಣದಲ್ಲಿ ಉಷ್ಣತೆ ಹೆಚ್ಚಾದ ಸಂದರ್ಭದಲ್ಲಿ ಹೊತ್ತಿ ಉರಿಯುವ ಗುಣ ಹೊಂದಿವೆ. ಅದೇ ರೀತಿ ಗೋದಾಮಿನ ಒಳ ಭಾಗದಲ್ಲಿ ಉಷ್ಣತೆ ಹೆಚ್ಚಾಗಿ ಬ್ಲೀಚಿಂಗ್ ಪುಡಿ ಚೀಲಗಳಿಗೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ. ಕಾಟನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.