ADVERTISEMENT

ಗ್ರಾಮಗಳಲ್ಲಿ ಅರಿವಿನ ಜ್ಯೋತಿ ಬೆಳಗಲಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:45 IST
Last Updated 18 ಫೆಬ್ರುವರಿ 2012, 19:45 IST

ನೆಲಮಂಗಲ: ಸ್ಥಳೀಯ ಬಸವಣ್ಣದೇವರ ಮಠದ ಅರಿವಿನ ಅಂಗಳ ವೇದಿಕೆ ವತಿಯಿಂದ ತಿಂಗಳಿಗೊಮ್ಮೆ ತಾಲ್ಲೂಕಿನ ಗ್ರಾಮ ಗ್ರಾಮಗಳಲ್ಲಿ ನಡೆಸಲಾಗುವ ಚಿಂತನಾ ಗೋಷ್ಠಿಯನ್ನು ಈ ಬಾರಿ ಹುಸ್ಕೂರಿನಲ್ಲಿ ನಡೆಸಲಾಯಿತು.

 ಹುಸ್ಕೂರಿನ ಬಸವ ಪ್ರೌಢಶಾಲೆಯಲ್ಲಿ ನಡೆದ ಪ್ರಥಮ ಚಿಂತನಾಗೋಷ್ಠಿಯನ್ನು ಉದ್ಘಾಟಿಸಿದ ಸಿದ್ದಗಂಗೆಯ ಸಿದ್ದಲಿಂಗ ಸ್ವಾಮೀಜಿ, `ಗ್ರಾಮ ಗ್ರಾಮಗಳಲ್ಲಿ ಅರಿವಿನ ಜ್ಯೋತಿ ಬೆಳಗಿ ಜೀವನ ಪಕ್ವವಾಗಲಿ~ ಎಂದರು.

 ಅನ್ನದಾನೇಶ್ವರ ಸ್ವಾಮೀಜಿ ಗೋಷ್ಠಿಯ ಮಹತ್ವ ಮತ್ತು ಅಗತ್ಯ ವಿವರಿಸಿದರು. ಶಿಕ್ಷಕರಾದ ಸಂಗಮೇಶ ಬಿರಾದರ, ಷಣ್ಮುಖಪ್ಪ, ಚಂದ್ರಶೇಖರಪ್ಪ, ಮುಖ್ಯ ಶಿಕ್ಷಕ ಶಶಿಧರ್ ಮಾತನಾಡಿದರು.  ಸಮಾಜ ಸೇವಾನಿರತ ಗ್ರಾಮದ ಪ್ರಮುಖರನ್ನು ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿಗಳು ಗೌರವಿಸಿದರು. ಪಂಡಿತ್ ಆರ್.ಜಿ.ಶ್ರೀಪಾದ ಭಕ್ತಿಗೀತೆ ಗಾಯನ ನಡೆಸಿಕೊಟ್ಟರು.

ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿಯರು `ವರದಕ್ಷಿಣೆಯಿಂದಾಗುವ ಅನಾಹುತ~ ನಾಟಕ ಪ್ರದರ್ಶಿಸಿದರು.

ರಥೋತ್ಸವ: ಪಟ್ಟಣದ ಪೇಟೆಬೀದಿಯ ರುದ್ರೇಶ್ವರ ಸ್ವಾಮಿ ರಥೋತ್ಸವವು ಮಂಗಳವಾರ (ಫೆ. 21) ಮಧ್ಯಾಹ್ನ 1ರಿಂದ 2ರವರೆಗೆ ನಡೆಯಲಿದೆ. ರಥೋತ್ಸವದ ಪ್ರಯುಕ್ತ ಭಾನುವಾರದಿಂದ ಬುಧವಾರದ ವರೆಗೆ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿವೆ.

ಭಾನುವಾರ ಸಂಜೆ ಗಂಗಾ ಮತ್ತು ಗಣಪತಿ ಪೂಜೆ, ಅಂಕುರಾರ್ಪಣೆ, ಧ್ವಜಾರೋಹಣ, ಸೋಮವಾರ ಶಿವರಾತ್ರಿಯಂದು ಕಳಶಾರಾಧನೆ, ಏಕದಶ ರುದ್ರ ಕಳಶ ಮತ್ತು ಉಮಾ ಮಹೇಶ್ವರ ಕಳಶ ಸ್ಥಾಪನೆ, ಮಂಗಳವಾರ ಸಂಜೆ ಶಿವಗಂಗೆಯ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ಪ್ರವಚನ, ಧೂಳೋತ್ಸವ, ಬುಧವಾರ ಧ್ವಜ ಆವರೋಹಣ, ಪೂರ್ಣಾಹುತಿ ನಡೆಯಲಿದೆ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ರುದ್ರೇಶ್ವರ ದೇವಾಲಯ ಟ್ರಸ್ಟ್ ಪ್ರಕಟಣೆ ತಿಳಿಸಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.