ADVERTISEMENT

ಗ್ರಾಹಕನನ್ನೇ ಇರಿದು ಕೊಂದ ಮಾಣಿಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಬೆಂಗಳೂರು: ನಗರದ ಚಂದ್ರಾಲೇಔಟ್ ಮತ್ತು ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿದ್ದಾರೆ.

ಊಟ ತಂದು ಕೊಡಲು ತಡ ಮಾಡಿದ ಕಾರಣಕ್ಕೆ ಜಗಳವಾಡಿದ ವ್ಯಕ್ತಿಗೆ ಹೋಟೆಲ್‌ನ ಕೆಲಸಗಾರರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೂಡಲಪಾಳ್ಯದಲ್ಲಿ ನಡೆದಿದೆ. ಕಾರು ಚಾಲಕ ರವಿ (26) ಕೊಲೆಯಾದ ವ್ಯಕ್ತಿ.

ಮೂಡಲಪಾಳ್ಯ ಸರ್ಕಲ್ ಬಳಿಯ ಪಾದಚಾರಿ ಮಾರ್ಗದಲ್ಲಿರುವ ಹೋಟೆಲ್ ಒಂದಕ್ಕೆ ಪಾನಮತ್ತರಾಗಿ ಬಂದಿದ್ದ ರವಿ ಮತ್ತು ಅವರ ಸ್ನೇಹಿತ ಮಹೇಶ್ ಅವರಿಗೆ ಊಟ ನೀಡಲು ಹೋಟೆಲ್‌ನ ಕೆಲಸಗಾರರು ತಡ ಮಾಡಿದರು.

ಇದರಿಂದ ಕೋಪಗೊಂಡ ಅವರು, ಹೋಟೆಲ್‌ನ ಮಾಲೀಕರು ಹಾಗೂ ಕೆಲಸಗಾರರ ಜತೆ ಜಗಳವಾಡಿದರು. ಅಲ್ಲದೇ ಹೋಟೆಲ್‌ನಲ್ಲಿದ್ದ ಸಾಮಗ್ರಿಗಳನ್ನು ಹೊರಗೆಸೆದು ದಾಂಧಲೆ ನಡೆಸಿದರು. ಈ ವೇಳೆ ಕೆಲಸಗಾರರು ಅವರಿಬ್ಬರ ಮೇಲೂ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯಾಳು ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಂದ್ರಾಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತೊಂದು ಪ್ರಕರಣ: ಲಗ್ಗೆರೆ ಸಮೀಪದ ಲಕ್ಷ್ಮಿದೇವಿನಗರದಲ್ಲಿ ದುಷ್ಕರ್ಮಿಗಳು ವೆಂಕಟೇಶ್ (32) ಎಂಬುವರ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಪ್ಪೆ ರಮೇಶ್ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟೇಶ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆತ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆತನ ವಿರುದ್ಧ ದರೋಡೆ, ಸುಲಿಗೆ ಮತ್ತಿತರ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮೂಲದ ವೆಂಕಟೇಶ್ ಈ ಹಿಂದೆ ಕುಟುಂಬ ಸದಸ್ಯರೊಂದಿಗೆ ಲಕ್ಷ್ಮಿದೇವಿನಗರದಲ್ಲೇ ವಾಸವಾಗಿದ್ದ. ಪೇಂಟರ್ ಆಗಿದ್ದ ಆತ ಕೆಲ ವರ್ಷಗಳ ಹಿಂದೆ ಕುಟುಂಬ ಸದಸ್ಯರೊಂದಿಗೆ ಬೇರೆ ಬಡಾವಣೆಗೆ ಹೋಗಿ ನೆಲೆಸಿದ್ದ. ರಾತ್ರಿ ಪಾನಮತ್ತನಾಗಿ ಲಕ್ಷ್ಮಿದೇವಿನಗರಕ್ಕೆ ಬಂದಿದ್ದ ಆತನ  ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.