ADVERTISEMENT

ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಲೂಟಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:25 IST
Last Updated 17 ಏಪ್ರಿಲ್ 2012, 19:25 IST

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಆಭರಣ ಅಂಗಡಿ ಪ್ರವೇಶಿಸಿದ ದುಷ್ಕರ್ಮಿಗಳು ಮಾಲೀಕರ ಗಮನ ಬೇರೆಡೆ ಸೆಳೆದು ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಈ ಸಂಬಂಧ ಅಂಗಡಿ ಮಾಲೀಕ ಅಮಿತ್ ಜೈನ್ ದೂರು ನೀಡಿದ್ದಾರೆ. ಬಸವೇಶ್ವರನಗರದ ತಿಮ್ಮಯ್ಯ ರಸ್ತೆಯಲ್ಲಿ ಲಬ್ಧಿ ಎಂಬ ಹೆಸರಿನ ಜ್ಯುವೆಲರಿ ಅಂಗಡಿಯಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಂಗಡಿಗೆ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

`ದುಷ್ಕರ್ಮಿಗಳು ಆಭರಣ ಖರೀದಿ ಮಾಡುವಂತೆ ನಾಟಕವಾಡಿ,130 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ನಾಲ್ಕು ಮಹಿಳೆಯರು ಸೇರಿದಂತೆ ಆರು ಜನ ಪ್ರಕರಣದಲ್ಲಿ ಭಾಗಿಯಾಗಿರುವುದು ಸಿಸಿಟಿವಿಯಲ್ಲಿ ಸಂಗ್ರಹವಾಗಿರುವ ದೃಶ್ಯಗಳಿಂದ ಗೊತ್ತಾಗಿದೆ. ಶೀಘ್ರವೇ ಆರೋಪಿಗಳ ಪತ್ತೆ ಮಾಡುತ್ತೇವೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ ತಿಳಿಸಿದರು.

ಮಹಿಳೆ ಸರ ಕಳವು
ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ 55 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಹೋಗಿರುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಚಂದ್ರಲೇಔಟ್‌ನ ಮೂರನೇ ಅಡ್ಡರಸ್ತೆ ನಿವಾಸಿ ಜಯಮ್ಮ ಸರ ಕಳೆದುಕೊಂಡವರು. ಮನೆ ಮುಂದೆ ನಿಂತಿದ್ದ ಅವರ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು, ಡ್ರೈವಿಂಗ್ ಸ್ಕೂಲ್‌ನ ವಿಳಾಸ ಕೇಳುವಂತೆ ನಾಟಕವಾಡಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಾರ್ಟ್‌ಮೆಂಟ್ ಮೇಲೆ ದಾಳಿ: ಬಂಧನ
ಬಿಟಿಎಂ ಲೇಔಟ್‌ನ ಎರಡನೇ ಹಂತದಲ್ಲಿರುವ ಅಪಾರ್ಟ್‌ಮೆಂಟ್ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ ಮಡಿವಾಳ ಠಾಣೆ ಪೊಲೀಸರು ಮೂವರು ಯುವತಿಯರು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಬಾಲನ್ (55), ಸುರೇಶ್ (41), ಭಾಸ್ಕರ್ (42) ಹಾಗೂ ಆಪಾರ್ಟ್‌ಮೆಂಟ್‌ನ ಮಾಲೀಕ ಸಾಹಿಲ್ ಥಾಮಸ್ ಬಂಧಿತರು. ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯಿಂದ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದರು. ಮಡಿವಾಳ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.