ADVERTISEMENT

ಗ್ಲೋಬಲ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಅಭಿವೃದ್ಧಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST
ಗ್ಲೋಬಲ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಅಭಿವೃದ್ಧಿಗೆ ಸಲಹೆ
ಗ್ಲೋಬಲ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಅಭಿವೃದ್ಧಿಗೆ ಸಲಹೆ   

ಬೆಂಗಳೂರು: `ಬಿಬಿಎಂಪಿ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ತರುವಲ್ಲಿ `ಗ್ಲೋಬಲ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್~ ಉಪಯುಕ್ತವೆನಿಸಿದ್ದು, ಈ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಬೇಕಿದೆ~ ಎಂದು ಕೇಂದ್ರ ವಿಚಕ್ಷಣ ಆಯೋಗದ ಆಯುಕ್ತ ಆರ್.ಶ್ರೀಕುಮಾರ್ ಹೇಳಿದರು.

ಸಿವಿಕ್ ಬೆಂಗಳೂರು ಸಂಸ್ಥೆಯು ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಸೆನೆಟ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಬಿಬಿಎಂಪಿಯ ವೆಬ್ ಆಧಾರಿತ ಗ್ಲೋಬಲ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್~ ಕುರಿತ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಜನತೆಗೆ ಮಾಹಿತಿ ನೀಡುವ ಉದ್ದೇಶದಿಂದ 2009ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಇದೀಗ ಎರಡು ವರ್ಷಗಳು ಪೂರ್ಣಗೊಳ್ಳುತ್ತಿದ್ದು, 33,000 ಕಾಮಗಾರಿಗಳ ಬಗ್ಗೆ  ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಿದೆ.
 
ಪಾಲಿಕೆ ಈವರೆಗೆ ಈ ವೆಬ್‌ಸೈಟ್‌ಅನ್ನು ಉತ್ತಮವಾಗಿ ನಿರ್ವಹಿಸುತ್ತಾ ಬಂದಿರುವುದು ಶ್ಲಾಘನೀಯ~ ಎಂದು ಹೇಳಿದರು.

`ಪಾಲಿಕೆ ಎಂಜಿನಿಯರ್‌ಗಳು ನಿಯಮಿತವಾಗಿ ವೆಬ್‌ಸೈಟ್‌ನಲ್ಲಿ ಮಾಹಿತಿ ದಾಖಲಿಸಬೇಕು. ಆ ಮೂಲಕ ಜನತೆಗೆ ತಕ್ಷಣದ ಮಾಹಿತಿ ದೊರೆಯುವಂತೆ ಮಾಡಬೇಕು. ಇದರಿಂದ ಕಾಮಗಾರಿಗಳ ಅಗತ್ಯ ಹಾಗೂ ಗುಣಮಟ್ಟ ಪರಿಶೀಲಿಸಲು  ಜನತೆಗೆ ನೆರವಾಗುತ್ತದೆ~ ಎಂದರು.

ಬಳಿಕ ಸಭಿಕರೊಂದಿಗೆ ಸಂವಾದ ನಡೆಸಿದರು. ಆಗ ಹಿರಿಯ ವ್ಯಕ್ತಿಯೊಬ್ಬರು, `ಕೆಲವೊಂದು ಕಾಮಗಾರಿಗಳ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ಇರುವುದಿಲ್ಲ. ರಾಜರಾಜೇಶ್ವರಿನಗರದಲ್ಲಿ ನಡೆಯುತ್ತಿರುವ ಬೃಹತ್ ವೆಚ್ಚದ ಕಾಮಗಾರಿಯ ಬಗ್ಗೆ ಬೃಹತ್ ರಸ್ತೆ ವಿಭಾಗ ಹಾಗೂ ರಾಜರಾಜೇಶ್ವರಿನಗರ ಯೋಜನಾ ವಿಭಾಗದ ಅಧಿಕಾರಿಗಳ ಬಳಿ ಮಾಹಿತಿಯೇ ಇಲ್ಲ.

ಈ ರೀತಿ ಬೇಜವಾಬ್ದಾರಿ ತೋರಿದರೆ ಹೊಸ ವ್ಯವಸ್ಥೆಯಿಂದ ಪ್ರಯೋಜನವಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಪ್ರತಿಕ್ರಿಯಿಸಿದ ಶ್ರೀಕುಮಾರ್, `ಎಂಜಿನಿಯರ್‌ಗಳ ಈ ರೀತಿಯ ಧೋರಣೆ ಸರಿಯಲ್ಲ. ಒಂದೊಮ್ಮೆ ಮಾಹಿತಿ ನೀಡದಿದ್ದರೆ ಈ ಕುರಿತು ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು.

ಇದು ದಾಖಲಾಗುವುದರಿಂದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪ್ರತಿಕ್ರಿಯೆ ನೀಡಬೇಕಾಗುತ್ತದೆ~ ಎಂದರು.

ಬಿಬಿಎಂಪಿ ಮಾದರಿಯಲ್ಲಿ ಬೆಸ್ಕಾಂ, ಜಲಮಂಡಳಿ, ಬಿಡಿಎ, ನಗರ ಸಂಚಾರ ಪೊಲೀಸ್ ವಿಭಾಗವು ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಬೇಕು. ಕನ್ನಡದಲ್ಲಿ ವಿವರಗಳು ಲಭ್ಯವಾಗಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ವಿವರ ದಾಖಲಿಸುವ ಬದಲು ಆರಂಭವಾಗುವ ಸಂದರ್ಭದಲ್ಲೇ ಮಾಹಿತಿ ದಾಖಲಿಸಬೇಕು ಎಂಬ ಸಲಹೆಗಳು ಕೇಳಿಬಂದವು.

ಪಾಲಿಕೆಯ ವಿಶೇಷ ಆಯುಕ್ತ ನಿರಂಜನ್, `ಈ ಹಿಂದೆ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇತ್ತು. ಆದರೆ ಮುಖ್ಯಮಂತ್ರಿಗಳ ಸಲಹೆಗಾರ (ಮೂಲಸೌಕರ್ಯ) ಡಾ.ಎ.ರವೀಂದ್ರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯುತ್ತಿದ್ದು, ಇಲಾಖೆಗಳ ನಡುವೆ ಸಮನ್ವಯದ ಕೊರತೆ ಕಡಿಮೆಯಾಗುತ್ತಿದೆ~ ಎಂದರು.

`ಇಂಡಿಯನ್ ಸೆಂಟರ್ ಫಾರ್ ಸೋಷಿಯಲ್ ಟ್ರಾನ್ಸ್‌ಫಾರ್ಮೇಶನ್~ ಸಂಸ್ಥೆಯ ಸ್ಥಾಪಕ ಟ್ರಸ್ಟಿ ರಾಜ ಸೀವನ್, ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಸಲಹೆಗಾರ ಶೇಷಾದ್ರಿ, ಸಿವಿಕ್ ಬೆಂಗಳೂರು ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.