ADVERTISEMENT

ಚಂದ್ರೇಗೌಡರಿಗೆ ನೋಟಿಸ್: ರೇಣುಕಾಚಾರ್ಯ ಅಪಸ್ವರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಸಂಸದ ಡಿ.ಬಿ.ಚಂದ್ರೇಗೌಡರಿಗೆ ನೋಟಿಸ್ ಕೊಟ್ಟ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಕ್ರಮದ ಬಗ್ಗೆ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಪಸ್ವರ ಎತ್ತಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಯಡಿಯೂರಪ್ಪ ನೇತೃತ್ವದಲ್ಲೇ ಎದುರಿಸಬೇಕೆಂದು ಚಂದ್ರೇಗೌಡರು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರು. ಆ ರೀತಿ ಹೇಳಿದ್ದು ಸರಿಯಲ್ಲ ಎಂದು ಈಶ್ವರಪ್ಪ ಅವರು ಗೌಡರಿಗೆ ನೋಟಿಸ್ ಕೊಟ್ಟಿದ್ದು, ಅದನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ರಾಮದಾಸ್ ಪಕ್ಷದ ಹಿರಿಯರ ಬಗ್ಗೆ ಹಗುರವಾಗಿ ಮಾತನಾಡಿದಾಗ ನೋಟಿಸ್ ನೀಡಲಿಲ್ಲ. ಇಂತಹ ಸನ್ನಿವೇಶದಲ್ಲಿ ಯಡಿಯೂರಪ್ಪ ಪರ ಮಾತನಾಡಿದ್ದಕ್ಕೆ ನೋಟಿಸ್ ಕೊಡುವುದು ಸರಿಯಲ್ಲ. ಅದನ್ನು ವಾಪಸ್ ಪಡೆಯಬೇಕು. ಇದು ಈಶ್ವರಪ್ಪ ವಿರುದ್ಧದ ಹೇಳಿಕೆಯಲ್ಲ ಎಂದು ಹೇಳಿದರು.

ಯಡಿಯೂರಪ್ಪ ನೇತೃತ್ವದಲ್ಲೇ ಕೊಪ್ಪಳ ಚುನಾವಣೆಯನ್ನು ಎದುರಿಸಬೇಕು ಎಂದು ಒತ್ತಾಯಿಸಿದರು. ಮುಂದಿನ ತಿಂಗಳು ಅವರಿಗೆ ಚಾಮರಾಜನಗರದಲ್ಲಿ ಅದ್ದೂರಿ ಸನ್ಮಾನ ಮಾಡಲಾಗುತ್ತದೆ ಎಂದರು.

`ಮದ್ಯದ ಅಂಗಡಿ ಬೇಡಿಕೆ ಪರಿಶೀಲನೆಗೆ ಸೂಚನೆ~
ಬೆಂಗಳೂರು:
ರಾಜ್ಯದಲ್ಲಿ ಸುಮಾರು 3000ಕ್ಕೂ ಹೆಚ್ಚು ಮದ್ಯದ ಅಂಗಡಿಗಳಿಗೆ ಬೇಡಿಕೆ ಇದ್ದು, ಆ ಕುರಿತು ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಸಾರಾಯಿ ನಿಷೇಧದಿಂದ 15 ಸಾವಿರಕ್ಕೂ ಹೆಚ್ಚು ಸಾರಾಯಿ ಅಂಗಡಿಗಳನ್ನು ಮುಚ್ಚಲಾಯಿತು. ಆ ನಂತರ ಹೊಸದಾಗಿ ಮದ್ಯದ ಅಂಗಡಿಗಳ ಆರಂಭಕ್ಕೆ ಅನುಮತಿ ನೀಡಿಲ್ಲ. ಬೇಡಿಕೆ ಬಹಳಷ್ಟು ಇದ್ದರೂ 1992ರ ನಂತರ ಪರವಾನಗಿ ನೀಡಿಲ್ಲ ಎಂದು ಅವರು ಹೇಳಿದರು.

ಈಗಲೂ ಪರವಾನಗಿ ನೀಡುವ ಬಗ್ಗೆ ತೀರ್ಮಾನಿಸಿಲ್ಲ. ಅಧಿಕಾರಿಗಳ ವರದಿ ಪರಿಶೀಲಿಸಿ, ನಂತರ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಅವರು ಕೊಡುವ ಸಲಹೆ ಪ್ರಕಾರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮದ್ಯಸಾರಕ್ಕೆ (ಸ್ಪಿರಿಟ್) ಆರು ಖಾಸಗಿ ಕಂಪೆನಿಗಳು ಬೇಡಿಕೆ ಇಟ್ಟಿದ್ದು, ಅದಕ್ಕೆ ಮಂಜೂರಾತಿ ನೀಡಲು ತಾಂತ್ರಿಕ ಸಮಿತಿ ಸಭೆ ಸೇರಿ ಚರ್ಚಿಸಿತು ಎಂದೂ ಹೇಳಿದರು.ರಾಜ್ಯದಲ್ಲಿ 27 ಕೋಟಿ ಲೀಟರ್ ಸ್ಪಿರಿಟ್ ಉತ್ಪಾದಿಸುತ್ತಿದ್ದು, ಅದರಲ್ಲಿ 19 ಕೋಟಿ ಲೀಟರ್ ಸ್ಪಿರಿಟ್ ಅನ್ನು ಮದ್ಯ ತಯಾರಿಕೆಗೆ ಬಳಸಲಾಗುತ್ತಿದೆ. 4 ಕೋಟಿ ಲೀಟರ್ ಎಥನಾಲ್ ಅನ್ನು ಪೆಟ್ರೋಲ್ ಜತೆ ಮಿಶ್ರಣಕ್ಕೆ ಬಳಕೆ ಮಾಡಲಾಗುತ್ತಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.