ADVERTISEMENT

ಚನಾವಣಾ ಅಕ್ರಮ: ಪ್ರಬಲ ಕಾಯ್ದೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಬೆಂಗಳೂರು:  ರಾಜಕೀಯ ಪಕ್ಷಗಳ ನಡವಳಿಕೆ ಮತ್ತು ಚುನಾವಣೆ ಸಮಯದಲ್ಲಿ ಅವುಗಳಿಂದ ಆಗುವ ಅಕ್ರಮಗಳನ್ನು ನಿಯಂತ್ರಿಸಲು ಪ್ರಬಲವಾದ ಕಾಯ್ದೆಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್.ಕೃಷ್ಣಮೂರ್ತಿ ಹೇಳಿದರು.

`ಭ್ರಷ್ಟಾಚಾರದ ವಿರುದ್ಧ ಯುವಜನತೆ~ (ವೈಎಸಿ) ಸಂಘಟನೆ ಸೋಮವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ `ಚುನಾವಣಾ ಸುಧಾರಣೆ~ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಸಂವಿಧಾನ ಮತ್ತು ದೇಶದ ಕಾನೂನುಗಳಿಗೆ ವಿರುದ್ಧವಾಗಿ ನಡೆಯುವ ರಾಜಕೀಯ ಪಕ್ಷಗಳನ್ನು ಕೆಲಕಾಲ ಅಮಾನತಿನಲ್ಲಿಡುವಷ್ಟು ಬಲಶಾಲಿಯಾದ ಕಾನೂನು ಜಾರಿಯಾದರೆ ಮಾತ್ರ ಚುನಾವಣೆಯಲ್ಲಿ ಸುಧಾರಣೆ ತರಲು ಸಾಧ್ಯ~ ಎಂದರು.

ರಾಜಕೀಯ ಪಕ್ಷಗಳ ನಡವಳಿಕೆಗಳನ್ನು ನಿಯಂತ್ರಿಸಲು ಪ್ರತ್ಯೇಕವಾದ ಕಾಯ್ದೆಯೊಂದನ್ನು ರೂಪಿಸುವಂತೆ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅಧ್ಯಕ್ಷತೆಯ ಸಂವಿಧಾನ ಪರಿಶೀಲನಾ ಆಯೋಗ ಶಿಫಾರಸು ಮಾಡಿತ್ತು. ಆದರೆ, ಈವರೆಗೂ ಅಂತಹ ಕಾಯ್ದೆಯನ್ನು ರೂಪಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿಲ್ಲ. ರಾಜಕೀಯ ಪಕ್ಷಗಳ ನಡುವಿನ ಸಹಮತದ ಕೊರತೆಯ ನೆಪ ಹೇಳಿ ಅಧಿಕಾರದಲ್ಲಿ ಇರುವವರು ತಪ್ಪಿಸಿಕೊಳ್ಳುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷಕ್ಕೂ ಚುನಾವಣಾ ಪದ್ಧತಿ ಸುಧಾರಣೆಯಲ್ಲಿ ಆಸಕ್ತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನುಷ್ಠಾನ ಸಾಧ್ಯ: ಚುನಾಯಿತ ಪ್ರತಿನಿಧಿಗಳನ್ನು `ಹಿಂದಕ್ಕೆ ಕರೆಸಿಕೊಳ್ಳುವ~ ಪದ್ಧತಿ ಜಾರಿಗೊಳಿಸುವುದು ಕಷ್ಟ ಎಂಬ ಮಾತಿನಲ್ಲಿ ಹುರುಳಿಲ್ಲ. ಪ್ರಾಯೋಗಿಕವಾಗಿ ಅನುಷ್ಠಾನ ಸಾಧ್ಯವಿದೆ. ಇದು ಶಾಸಕರಿಗೆ ಬೆದರಿಕೆ ಅಲ್ಲ. ಆದರೆ, ಕೆಟ್ಟ ಶಾಸಕರಿಗೆ ಬೆದರಿಕೆ ಆಗಬಲ್ಲುದು ಎಂದರು.

ನ್ಯಾಯಮಂಡಳಿ ಸ್ಥಾನಮಾನ ಅಗತ್ಯ:ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ ಅವರು, `ಕೇಂದ್ರ ಚುನಾವಣಾ ಆಯೋಗವು ನ್ಯಾಯಮಂಡಳಿಯ ಸ್ಥಾನಮಾನ ಹೊಂದಿಲ್ಲ. ಇದರಿಂದಾಗಿ ಚುನಾವಣೆಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ಸಂಪೂರ್ಣ ತನಿಖೆ ಮತ್ತು ವಿಚಾರಣೆ ನಡೆಸುವುದಕ್ಕೆ ಅದಕ್ಕೆ ಅಧಿಕಾರವಿಲ್ಲ. ಆಯೋಗಕ್ಕೆ ನ್ಯಾಯಮಂಡಳಿಯ ಸ್ಥಾನಮಾನ ನೀಡಿದರೆ ಮಾತ್ರ ಚುನಾವಣಾ ಪದ್ಧತಿಯ ಸುಧಾರಣೆಯಲ್ಲಿ ಮೊದಲನೇ ಹೆಜ್ಜೆ ಇಟ್ಟಂತಾಗುತ್ತದೆ~ ಎಂದರು.

ಜಾಮೀನು ಖುಲಾಸೆಯಲ್ಲ: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಬಹುತೇಕ ಕಲಂಗಳಲ್ಲಿ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ಇದೆ. ಅಂತಹ ಕಲಂಗಳ ಉಲ್ಲೇಖವಿರುವ ಪ್ರಕರಣಗಳಲ್ಲಿ ಸಹಜವಾಗಿಯೇ ಆರೋಪಿಗಳಿಗೆ ಜಾಮೀನು ದೊರೆಯುತ್ತದೆ. ಆದರೆ, ಜಾಮೀನು ದೊರೆಯುವುದನ್ನೇ ಖುಲಾಸೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದ ರಾಜಕೀಯ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂದರು.

ಜೈನ್ ವಿಶ್ವವಿದ್ಯಾಲಯದ ಸಹಕುಲಪತಿ ಡಾ.ಸಂದೀಪ್ ಶಾಸ್ತ್ರಿ ಅವರು ಚುನಾವಣಾ ಸುಧಾರಣೆ ಕುರಿತು ಮಾತನಾಡಿದರು. ವೈಎಸಿಯ ರಾಷ್ಟ್ರೀಯ ಸಹಸಂಚಾಲಕ ಎನ್.ರವಿಕುಮಾರ್, ರಾಜ್ಯ ಘಟಕದ ಸಂಚಾಲಕ ಕರಣ್‌ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.