ಬೆಂಗಳೂರು: ಪರ್ಯಾಯ ಕಾರ್ಮಿಕ ಒಕ್ಕೂಟಕ್ಕೆ ಮಾನ್ಯತೆ ನೀಡುವುದನ್ನು ವಿರೋಧಿಸಿ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ, ಕಲಾವಿದರ ಒಕ್ಕೂಟವು ಚಿತ್ರೀಕರಣ ಚಟುವಟಿಕೆಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಬಂದ್ ನಡೆಸಲು ತೀರ್ಮಾನಿಸಿದೆ.
ಹೊಸ ಒಕ್ಕೂಟಕ್ಕೆ ಮಾನ್ಯತೆ ನೀಡಬಾರದು ಎಂದು ಒತ್ತಾಯಿಸಿ ಅಶೋಕ್ ನೇತೃತ್ವದ ಒಕ್ಕೂಟವು ಚಲನಚಿತ್ರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದೆ.
ಹೊಸ ಒಕ್ಕೂಟಕ್ಕೆ ಮಾನ್ಯತೆ ನೀಡಬಾರದು ಎಂದು ಆಗ್ರಹಿಸಿ ಅಶೋಕ್ ನೇತೃತ್ವದ ಒಕ್ಕೂಟದ ಕಾರ್ಮಿಕರು ಸೋಮವಾರ ಎಲ್ಲಾ ಚಿತ್ರಗಳ ಚಿತ್ರೀಕರಣ ಕಾರ್ಯ ಸ್ಥಗಿತಗೊಳಿಸಿ ಗಾಂಧಿನಗರದಿಂದ ಚಲನಚಿತ್ರ ವಾಣಿಜ್ಯ ಮಂಡಳಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ನಿರ್ಮಾಪಕರು ತಮ್ಮ ಸಿನಿಮಾಗಳ ಕೆಲಸಕ್ಕೆ ಯಾವುದೇ ಒಕ್ಕೂಟದ ಸದಸ್ಯರನ್ನಾದರೂ ಬಳಸಿಕೊಳ್ಳಬಹುದು. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂಬ ನಿರ್ಣಯ ತೆಗೆದುಕೊಳ್ಳಲಾಯಿತು. ಈ ನಿರ್ಣಯಕ್ಕೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಪರ್ಯಾಯ ಒಕ್ಕೂಟ ರಚನೆಗೆ ಬೆಂಬಲ ನೀಡುತ್ತಿರುವ ಕೆಲ ನಿರ್ಮಾಪಕರು ಅವಾಚ್ಯ ಶಬ್ದಗಳಿಂದ ತಮ್ಮನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾನಿರತರು ನಿರ್ಮಾಪಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ವಾಣಿಜ್ಯ ಮಂಡಳಿಯ ಎದುರು ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ನೇತೃತ್ವದಲ್ಲಿ ರಚನೆಯಾಗಿರುವ ಹೊಸ ಒಕ್ಕೂಟಕ್ಕೆ ಮಾನ್ಯತೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಚಲನಚಿತ್ರ ವಾಣಿಜ್ಯ ಮಂಡಳಿ ಸೋಮವಾರ ಸಭೆ ಕರೆದಿತ್ತು. ಈ ಸಭೆಯಲ್ಲಿ ಒಕ್ಕೂಟಕ್ಕೆ ಮಾನ್ಯತೆ ನೀಡುವುದು ಖಚಿತ ಎಂಬ ವದಂತಿ ಹಬ್ಬಿತ್ತು. ಹೀಗಾಗಿ ಕಾರ್ಮಿಕರ ಒಕ್ಕೂಟದ ಸದಸ್ಯರು ಪ್ರತಿಭಟನೆಗೆ ಮುಂದಾದರು.
‘ನಟರು ಮಾತನಾಡುತ್ತಿಲ್ಲ’
ಇಪ್ಪತ್ತೈದು ವರ್ಷದ ಚಿತ್ರರಂಗದ ಬದುಕಿನಲ್ಲಿ ಮೊದಲ ಬಾರಿಗೆ ಇಂಥ ಕಹಿ ಅನುಭವ ಉಂಟಾಗಿದೆ. ಕೆಲವೇ ನಿರ್ಮಾಪಕರ ಹಿತಾಸಕ್ತಿಗಾಗಿ ಚಿತ್ರರಂಗದಲ್ಲಿ ಒಡಕು ಮೂಡಿಸಲಾಗುತ್ತಿದೆ. ಇಷ್ಟೆಲ್ಲಾ ನಡೆದರೂ ಚಿತ್ರರಂಗದ ಯಾವ ಹಿರಿಯ ನಿರ್ಮಾಪಕರೂ, ನಟರೂ ಬಹಿರಂಗವಾಗಿ ಕಾರ್ಮಿಕರ ಪರವಾಗಿ ಮಾತನಾಡುತ್ತಿಲ್ಲ ಎಂಬ ಬಗ್ಗೆ ನೋವಾಗುತ್ತಿದೆ.
– ಅಶೋಕ್, ಚಲನಚಿತ್ರ ಕಾರ್ಮಿಕ ಒಕ್ಕೂಟದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.