ಮಹದೇವಪುರ: ಕೆಲ ತಿಂಗಳುಗಳ ಹಿಂದಷ್ಟೇ ಡಾಂಬರೀಕರಣಗೊಂಡು ಕಳಪೆ ಕಾಮಗಾರಿಯಿಂದಾಗಿ ಹದಗೆಟ್ಟು ಹೋಗಿದ್ದ ಕ್ಷೇತ್ರದ ಬೆಳ್ಳಂದೂರು ಸಮೀಪದ ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ಗ್ರಾಮದ ಮುಖ್ಯ ರಸ್ತೆಗೆ ಜಲ್ಲಿ ಕಲ್ಲು ಹಾಕಿ ದುರಸ್ತಿಗೊಳಿಸುವ ಕಾರ್ಯ ಇತ್ತೀಚೆಗೆ ಆರಂಭಗೊಂಡಿದೆ.
`ಪ್ರಜಾವಾಣಿ~ಯಲ್ಲಿ ಇತ್ತೀಚೆಗೆ `ಕಳಪೆ ಕಾಮಗಾರಿ- ಹದಗೆಟ್ಟ ರಸ್ತೆ~ ಎಂಬ ಚಿತ್ರ ಸಹಿತ ವರದಿ ಪ್ರಕಟವಾಗಿತ್ತು.ಸರ್ಜಾಪುರ ಮುಖ್ಯ ರಸ್ತೆ ಹಾಗೂ ದೊಡ್ಡಕನ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕೊಂಡಿಯಾಗಿರುವ ಚಿಕ್ಕನಾಯಕನಹಳ್ಳಿ ಮುಖ್ಯ ರಸ್ತೆ ಕಳೆದ ಐದಾರು ತಿಂಗಳುಗಳ ಹಿಂದಷ್ಟೇ ನಿರ್ಮಾಣಗೊಂಡಿತ್ತು.
ಆದರೆ ಡಾಂಬರೀಕರಣ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದ್ದ ಹಿನ್ನೆಲೆಯಲ್ಲಿ ರಸ್ತೆ ನಡುವೆ ಸಾಕಷ್ಟು ಹೊಂಡಗಳು ಬಿದ್ದಿದ್ದವು. ಇದರಿಂದಾಗಿ ಸಾರ್ವಜನಿಕರ ಓಡಾಟಕ್ಕೆ ತೀವ್ರ ಅನಾನುಕೂಲವಾಗಿತ್ತು.
ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಿದ್ದರು.
ಆದರೆ ಹದಗೆಟ್ಟ ರಸ್ತೆ ಮಾತ್ರ ಸುಧಾರಣೆ ಕಂಡಿರಲಿಲ್ಲ. ಈ ಕುರಿತು ಪತ್ರಿಕೆಯಲ್ಲಿ ವಿವರವಾಗಿ ಸುದ್ದಿ ಪ್ರಕಟಗೊಂಡ ಬಳಿಕ ಹದಗೆಟ್ಟ ರಸ್ತೆಯ ನಡುವಿನ ಹೊಂಡಗಳನ್ನು ಮುಚ್ಚಲಾಗಿದೆ. ಅಲ್ಲದೆ ರಸ್ತೆಗೆ ಜಲ್ಲಿ ಕಲ್ಲುಗಳನ್ನು ಸುರಿದು ದುರಸ್ತಿಗೊಳಿಸುವ ಕೆಲಸ ಭರದಿಂದ ಸಾಗಿದೆ. ನಿರ್ಮಾಣಗೊಳ್ಳುತ್ತಿರುವ ರಸ್ತೆಯನ್ನು ಆದಷ್ಟು ತುರ್ತಾಗಿ ಹಾಗೂ ವ್ಯವಸ್ಥಿತವಾಗಿ ಉತ್ತಮ ಗುಣಮಟ್ಟದೊಂದಿಗೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.