ADVERTISEMENT

ಚಿತ್ರಕಲಾ ಪರಿಷತ್ತಿನಲ್ಲಿಯೂ ಪಿಎಚ್‌.ಡಿ ಲಭ್ಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2014, 19:43 IST
Last Updated 3 ಜೂನ್ 2014, 19:43 IST

ಬೆಂಗಳೂರು: ವಿದ್ಯಾರ್ಥಿಗಳ ಕಲಾಸಕ್ತಿ­ಯನ್ನುಗಮನದಲ್ಲಿ­ಟ್ಟುಕೊಂಡು, ಅದ­ರಲ್ಲಿ ವೃತ್ತಿಪರತೆ ಸಾಧಿಸಲು ಪೂರಕ­ವಾದ ಕೋರ್ಸ್‌ಗಳು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಲಭ್ಯವಿದೆ.

ಈ ಕೋರ್ಸ್‌ಗಳಿಗೆ ಶೈಕ್ಷಣಿಕ ಸಾಧನೆ ನಗಣ್ಯ. ಎಂಜಿನಿಯರಿಂಗ್‌, ಎಂಬಿಎ­ನಂತಹ ಪದವಿಯನ್ನು ಅರ್ಧಕ್ಕೆ ಬಿಟ್ಟು, ಕಲೆ ಕೈ ಬೀಸಿತೆಂದು ಚಿತ್ರಕಲಾ ಪರಿಷತ್ತಿ­ನೆಡೆಗೆ ಹೆಜ್ಜೆ ಇಟ್ಟವರ ಸಂಖ್ಯೆ ಹೆಚ್ಚೇ ಇದೆ.

ಚಿತ್ರಕಲೆ, ಪ್ರತಿಮೆಯನ್ನು ನಿರ್ಮಿಸುವ ಕಲೆ, ಗ್ರಾಫಿಕ್‌ ಕಲೆ, ಅನ್ವಯಿಕ ಕಲೆ, ಕಲಾ ಇತಿಹಾಸ ಹೀಗೆ ಐದು ವಿಷಯ­ಗಳಲ್ಲಿ ಪರಿಷತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ, ಪಿ.ಜಿ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತಿದೆ.

ನಾಲ್ಕು ವರ್ಷದ ಪದವಿಯಲ್ಲಿ ಎರಡು ಸೆಮಿಸ್ಟರ್‌ ಚಿತ್ರಕಲೆಯ ಮೂಲ ಜ್ಞಾನಕ್ಕೆ ಮೀಸಲಾದರೆ, ಉಳಿದ ನಾಲ್ಕು  ಸೆಮಿಸ್ಟರ್‌ಗಳು ಯಾವುದಾದರೊಂದು ವಿಷಯದಲ್ಲಿ ಪರಿಣತಿ ಸಾಧಿಸಲು ಪೂರಕವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕಾಲೇಜಿನ ಪ್ರಾಂಶು­ಪಾಲ ಡಾ.ಆರ್‌.ಎಚ್.­ಕುಲಕರ್ಣಿ,  ‘ಪದವಿ­ಗಾಗಿ 150 ಸೀಟುಗಳು ಹಾಗೂ ಸ್ನಾತಕೋತ್ತರ ಪದವಿಗಾಗಿ 25 ಸೀಟುಗಳು ಲಭ್ಯವಿದೆ. ಪಿಯುಸಿಯಲ್ಲಿ ಗಳಿಸಿದ ಅಂಕಗಳಿಗೆ ಮನ್ನಣೆಯಿಲ್ಲ. ಪ್ರವೇಶ ಪಡೆಯಲು ಕಟ್‌ ಆಫ್‌ ಅಂಕ ಇರುವುದಿಲ್ಲ. ಕಲೆಯ ವಿವಿಧ ಪ್ರಕಾರಗಳ ಬಗ್ಗೆ ತೀವ್ರ ಆಸಕ್ತಿ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ವರ್ಷ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಾಮರ್ಥ್ಯ ಹಾಗೂ ಸೃಜನಶೀಲತೆ­ಯನ್ನು ಅರಿತು ಪ್ರವೇಶ ನೀಡಲಾಗುತ್ತದೆ. ಈ  ಬಾರಿ ಜೂನ್‌ 9 ಮತ್ತು 10 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಈಗಾಗಲೇ ಅರ್ಜಿ­ಗಳನ್ನು ವಿತರಿಸಲಾಗುತ್ತಿದ್ದು,   ಭರ್ತಿ ಮಾಡಿದ ಅರ್ಜಿ ನೀಡಲು ಜೂನ್‌ 7 ಕೊನೆಯ ದಿನಾಂಕ’ ಎಂದು ಹೇಳಿದರು.

‘ಪದವಿಗಾಗಿ 200ಕ್ಕೂ ಅಧಿಕ ಅರ್ಜಿ­ಗಳು ವಿತರಣೆಯಾಗಿದೆ. ಈ ಕಾಲೇಜಿ­ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ ನೆರೆ ರಾಜ್ಯಗಳಲ್ಲದೇ ಇರಾನ್‌, ವಾಷಿಂಗ್ಟನ್‌, ಮಸ್ಕತ್‌ನಿಂದಲೂ ವಿದ್ಯಾರ್ಥಿಗಳು ಬರುತ್ತಾರೆ’ ಎಂದು ತಿಳಿಸಿದರು

‘ಶೇ 50 ರಿಂದ 60ರಷ್ಟು  ಸೀಟುಗಳು  ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲು.  ಪಿಯುಸಿ ಪೂರಕ ಪರೀಕ್ಷೆಗಳು ನಡೆಯು­ವವರೆಗೂ ಪ್ರವೇಶ ಪ್ರಕ್ರಿಯೆ ನಡೆಯ­ಲಿದೆ. ಇನ್ನೂ ಕಲೆಯಲ್ಲಿ ಆಸಕ್ತಿ ಇರುವ ಪತ್ರಿಕೋದ್ಯಮ, ಐಚ್ಛಿಕ ಕನ್ನಡ ಹಾಗೂ ಇಂಗ್ಲಿಷ್‌, ಮನಃಶಾಸ್ತ್ರ ಸೇರಿದಂತೆ ಮಾನವಿಕ ವಿಭಾಗದ ವಿದ್ಯಾರ್ಥಿಗಳಿಗಾ­ಗಿಯೇ ಒಂದು ವರ್ಷದ ಕಲಾ ಇತಿಹಾಸ ಕೋರ್ಸ್‌ ಇದೆ’ ಎಂದು ಹೇಳಿದರು.

ಪಿಎಚ್‌.ಡಿ: ‘ಪ್ರಸಕ್ತ ವರ್ಷದಿಂದ ಪಿಎಚ್‌.ಡಿ ಪದವಿ ನೀಡಲು ಬೆಂಗಳೂರು ವಿಶ್ವವಿದ್ಯಾಲಯದಿಂದ ಅನುಮತಿ ದೊರೆತಿದೆ. ಚಿತ್ರಕಲೆಯ ವಿವಿಧ ಪ್ರಕಾರ­ಗಳಲ್ಲಿ ಆಸಕ್ತಿಯಿರುವ ಸಂಶೋಧನಾ ಮನೋಭಾವದ ವಿದ್ಯಾರ್ಥಿ­ಗಳಿಗಷ್ಟೆ ಆದ್ಯತೆ ನೀಡಲಾ­ಗುತ್ತದೆ.  ಪ್ರಾಯೋಗಿಕ ಅನುಭವಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಕಲೆಯಲ್ಲಿ ಪರಿಣತಿ ಸಾಧಿಸಿದವರಿಗೆ  ಉತ್ತಮ ಬೇಡಿಕೆಯಿದೆ. ಪ್ರತಿ ವರ್ಷ ಆಹ್ವಾನ ನೀಡದೇ ವಿಪ್ರೊ, ಟಿವಿಸ್‌ ಸೇರಿ­ದಂತೆ ಹಲವು ಪ್ರತಿಷ್ಠಿತ ಕಂಪೆನಿಗಳು ಕ್ಯಾಂಪಸ್‌ ಆಯ್ಕೆಗಾಗಿ ಪರಿಷತ್ತನ್ನು ಭೇಟಿ ಮಾಡುತ್ತಿವೆ. ಶೇ 70ರಷ್ಟು ವಿದ್ಯಾರ್ಥಿ­ಗಳು ಆಯ್ಕೆಯಾಗುತ್ತಾರೆ. ಉಳಿದವರು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ’ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗೆ: 080–2226 1816/2226 3424. www.karnatakachitrakalaparishath.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.