ಬೆಂಗಳೂರು: ಸೀಮಾಸುಂಕ (ಕಸ್ಟಮ್ಸ) ಅಧಿಕಾರಿಗಳ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ತನಿಖೆಗೆಂದು ಕರೆದೊಯ್ದ ದುಷ್ಕರ್ಮಿಗಳು ಅವರನ್ನು ವಂಚಿಸಿ ಒಂದು ಕೆ.ಜಿ ಚಿನ್ನದ ಗಟ್ಟಿ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ದಂಡು ರೈಲು ನಿಲ್ದಾಣದ (ಕಂಟೋನ್ಮೆಂಟ್) ಬಳಿ ನಡೆದಿದೆ.
ಈ ಸಂಬಂಧ ತಮಿಳುನಾಡು ಮೂಲದ ಷಣ್ಮುಖ ಎಂಬುವರು ದೂರು ಕೊಟ್ಟಿದ್ದಾರೆ. ಷಣ್ಮುಖ ಅವರು, ತಮಿಳುನಾಡಿನ ಚಿನ್ನಾಭರಣ ವ್ಯಾಪಾರಿ ರಾಮ್‌ಕುಮಾರ್ ಎಂಬುವರ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ರಾಮ್‌ಕುಮಾರ್ ಅವರು, ಬೆಂಗಳೂರಿನ ಆಭರಣ ಮಳಿಗೆಯೊಂದಕ್ಕೆ ನೀಡುವಂತೆ ಒಂದು ಕೆ.ಜಿ ಚಿನ್ನದ ಗಟ್ಟಿಯನ್ನು ಷಣ್ಮುಖ ಅವರಿಗೆ ಕೊಟ್ಟು ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ (ಜು.7) ಬೆಳಿಗ್ಗೆ ಆರು ಗಂಟೆ ಸುಮಾರಿಗೆ ತಮಿಳುನಾಡಿನಿಂದ ರೈಲಿನಲ್ಲಿ ದಂಡು ರೈಲು ನಿಲ್ದಾಣಕ್ಕೆ ಬಂದ ಷಣ್ಮುಖ ಅವರು, ನಿಲ್ದಾಣದ ಪ್ರವೇಶದ್ವಾರದ ಬಳಿ ಆಟೊಗೆ ಕಾಯುತ್ತಾ ನಿಂತಿದ್ದರು. ಈ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ನಾಲ್ಕೈದು ಮಂದಿ ಅಪರಿಚಿತ ವ್ಯಕ್ತಿಗಳು ಕಸ್ಟಮ್ಸ ಅಧಿಕಾರಿಗಳೆಂದು ಹೇಳಿ ಷಣ್ಮುಖ ಅವರನ್ನು ವಾಹನಕ್ಕೆ ಹತ್ತಿಸಿಕೊಂಡರು. ತನಿಖೆಯ ನೆಪದಲ್ಲಿ ಅವರನ್ನು ಸ್ವಲ್ಪ ದೂರ ಕರೆದೊಯ್ದ ದುಷ್ಕರ್ಮಿಗಳು, ಮಾರ್ಗಮಧ್ಯೆ ಚಿನ್ನದ ಗಟ್ಟಿ ಕಿತ್ತುಕೊಂಡು ಕಾರಿನಿಂದ ಕೆಳಗಿಳಿಸಿ ಪರಾರಿಯಾಗಿದ್ದಾರೆ.
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.