ADVERTISEMENT

ಚಿನ್ನದ ಬಳೆ ಮರಳಿ ಮಾಲೀಕರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:32 IST
Last Updated 3 ಸೆಪ್ಟೆಂಬರ್ 2013, 19:32 IST

ಬೆಂಗಳೂರು:  ಕಾಕಿನಾಡ - ಬೆಂಗಳೂರು ಮಾರ್ಗದ ಶೇಷಾದ್ರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾನುವಾರ 14 ಗ್ರಾಂ ತೂಕದ ಚಿನ್ನದ ಬಳೆ ಸಿಕ್ಕಿದೆ. ರೈಲ್ವೆ ಸುರಕ್ಷತಾ ಪಡೆ (ಆರ್‌ಪಿಎಫ್) ಪೊಲೀಸರು, ಅದರ ಮಾಲೀಕರನ್ನು ಪತ್ತೆ ಹಚ್ಚಿ ಆಭರಣವನ್ನು ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್‌ಪಿಎಫ್‌ನ ಎಸ್‌ಐ ರಹಮತ್‌ವುಲ್ಲಾ ಖಾನ್ ಮತ್ತು ಕಾನ್‌ಸ್ಟೆಬಲ್ ಮಂಜುನಾಥ್ ಅವರು ಎಂದಿನಂತೆ ಭಾನುವಾರ ರಾತ್ರಿ ಶೇಷಾದ್ರಿ ಎಕ್ಸ್‌ಪ್ರೆಸ್ ರೈಲನ್ನು ಪರಿಶೀಲಿಸಲು ತೆರಳಿದಾಗ `ಎಫ್-5' ಸ್ಲೀಪರ್ ಕೋಚ್ ಬೋಗಿಯಲ್ಲಿ ಚಿನ್ನದ ಬಳೆ ಸಿಕ್ಕಿತ್ತು. ಅದನ್ನು ವಶಕ್ಕೆ ತೆಗೆದುಕೊಂಡ ಸಿಬ್ಬಂದಿ, ಆಂಧ್ರಪ್ರದೇಶ ಮೂಲದ ದಂಪತಿಯನ್ನು ಪತ್ತೆ ಮಾಡಿದ್ದಾರೆ.

`ಎಫ್-5 ಸ್ಲೀಪರ್ ಕೋಚ್ ಬೋಗಿಯಲ್ಲಿ ಪ್ರಯಾಣಿಸುವವರು ಮೊದಲೇ ಟಿಕೆಟ್ ಕಾಯ್ದಿರಿಸುತ್ತಾರೆ. ಹೀಗಾಗಿ ಬಳೆ ಪತ್ತೆಯಾದ ಸ್ಥಳದ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರ ಹೆಸರು, ವಿವರಗಳನ್ನು (ಪಿಎನ್‌ಆರ್) ರೈಲಿನ ಹೊರಭಾಗದಲ್ಲಿ ಅಂಟಿಸಲಾಗಿದ್ದ ಪಟ್ಟಿಯಲ್ಲಿ ಪರಿಶೀಲಿಸಲಾಯಿತು. ಆಗ ಆಂಧ್ರಪ್ರದೇಶದ ಕೋಡೂರು ಗ್ರಾಮದ ಶ್ರೀಕಾಂತ್ ಎಂಬುವರು ಆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ಗೊತ್ತಾಯಿತು. ಅವರು ತಿರುಪತಿ ರೈಲು ನಿಲ್ದಾಣದಿಂದ ಟಿಕೆಟ್ ಬುಕ್ ಮಾಡಿಸಿದ್ದರು ಎಂಬುದೂ ತಿಳಿಯಿತು' ಎಂದು ರೆಹಮತ್‌ವುಲ್ಲಾ ಖಾನ್ ತಿಳಿಸಿದರು.

ಪಿಎನ್‌ಆರ್ ವಿವರಗಳಿಂದ ತಿರುಪತಿ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿ ಶ್ರೀಕಾಂತ್ ಅವರ ಮೊಬೈಲ್ ಸಂಖ್ಯೆಯನ್ನು ಪಡೆಯಲಾಯಿತು. ಅವರಿಗೆ ಕರೆ ಮಾಡಿದಾಗ `ತಿರುಪತಿಯಿಂದ ಕೆ.ಆರ್.ಪುರದಲ್ಲಿರುವ ಸಂಬಂಧಿಕರ ಮನೆಗೆ ಶೇಷಾದ್ರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದಿದ್ದೆವು. ಈ ವೇಳೆ ಪತ್ನಿಯ ಕೈಲಿದ್ದ ಚಿನ್ನದ ಬಳೆ ಕಳೆದು ಹೋಗಿತ್ತು' ಎಂದು ಹೇಳಿದರು. ಬಳಿಕ ದಂಪತಿಯನ್ನು ನಗರಕ್ಕೆ ಕರೆಸಿ ಅವರ ಬಳಿ ಇದ್ದ ಮತ್ತೊಂದು ಬಳೆಯೊಂದಿಗೆ ತಾಳೆ ನೋಡಿದಾಗ ಅದು ಶ್ರೀಕಾಂತ್‌ಗೆ ಸೇರಿದ ಆಭರಣ ಎಂಬುದು ಖಚಿತವಾಯಿತು ಎಂದರು.

ಬಳೆಯನ್ನು ಮಾಲೀಕರಿಗೆ ಒಪ್ಪಿಸುವಲ್ಲಿ ರಹಮತ್‌ವುಲ್ಲಾ ಖಾನ್ ಮತ್ತು ಕಾನ್‌ಸ್ಟೆಬಲ್ ಮಂಜುನಾಥ್ ತೋರಿದ ಕರ್ತವ್ಯ ನಿಷ್ಠೆಗೆ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅನಿಲ್ ಕುಮಾರ್ ಅಗರ್‌ವಾಲ್ ಮತ್ತು ಆರ್‌ಪಿಎಫ್‌ನ ವಿಭಾಗೀಯ ಭದ್ರತಾ ಆಯುಕ್ತ ಎಸ್.ಲೂಯಿಸ್ ಅಮುಥನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.