ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಅವಳಿ ಬಾಂಬ್ ಸ್ಫೋಟ: ಡಿಎನ್‌ಎ ಪರೀಕ್ಷೆಯಿಂದ ದೃಢ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 19:30 IST
Last Updated 10 ಆಗಸ್ಟ್ 2012, 19:30 IST

ಬೆಂಗಳೂರು: `ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದ್ದ ಬಾಂಬ್‌ನ ಮೇಲೆ ವ್ಯಕ್ತಿಯೊಬ್ಬರ ತಲೆಗೂದಲುಗಳು ಪತ್ತೆಯಾಗಿದ್ದವು. ಆ ಕೂದಲುಗಳು ಪ್ರಕರಣದ ಆರೋಪಿ ಮಹಮ್ಮದ್ ಖತೀಲ್ ಸಿದ್ದಿಕಿಯದ್ದು (31) ಎಂಬುದು ಡಿಎನ್‌ಎ ಪರೀಕ್ಷೆಯಿಂದ ದೃಢಪಟ್ಟಿದೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಿರ್ಜಿ, `ಬಾಂಬ್ ಸ್ಫೋಟ ಸಂಭವಿಸಿದ ನಂತರ ಸಿಬ್ಬಂದಿ ಸುತ್ತಮುತ್ತಲ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಕ್ರೀಡಾಂಗಣದ ಒಂದನೇ ಮತ್ತು ಎಂಟನೇ ಪ್ರವೇಶದ್ವಾರ ಹಾಗೂ ಕ್ವೀನ್ಸ್ ರಸ್ತೆಯ ಬಸ್ ನಿಲ್ದಾಣದ ಬಳಿ ಮೂರು ಬಾಂಬ್‌ಗಳು ಪತ್ತೆಯಾಗಿದ್ದವು. ಬಸ್ ನಿಲ್ದಾಣದ ಸಮೀಪ ಸಿಕ್ಕಿದ್ದ ಬಾಂಬ್‌ಗೆ ಸುತ್ತಿದ್ದ ಸೆಲೋಟೇಪ್‌ನಲ್ಲಿ ಮೂರು ತಲೆಗೂದಲು ಅಂಟಿಕೊಂಡಿದ್ದವು. ಹೆಚ್ಚಿನ ತನಿಖೆಗಾಗಿ ಆ ಕೂದಲುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿತ್ತು~ ಎಂದರು.

`ದೆಹಲಿ ಮತ್ತು ಪುಣೆ ಪೊಲೀಸರು ಬಂಧಿಸಿದ್ದ ಸಿದ್ದಿಕಿ, ಅಫ್ತಾಬ್ ಆಲಂ ಅಲಿಯಾಸ್ ಫರೂಕ್ (24) ಹಾಗೂ ಗಯೂರ್ ಅಹಮ್ಮದ್ ಜಮಾಲಿ (21) ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬಾಡಿ ವಾರೆಂಟ್ ಮೇಲೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆ ಮೂರು ಮಂದಿಯನ್ನು ನಗರಕ್ಕೆ ಕರೆತಂದು ನ್ಯಾಯಾಧೀಶರ ಅನುಮತಿ ಪಡೆದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಅವರ ರಕ್ತ ಮಾದರಿಯನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ರಕ್ತ ಮಾದರಿ ಮತ್ತು ಬಾಂಬ್‌ನಲ್ಲಿ ಪತ್ತೆಯಾಗಿದ್ದ ತಲೆ ಕೂದಲುಗಳನ್ನು ಪರೀಕ್ಷಿಸಿದ ಎಫ್‌ಎಸ್‌ಎಲ್ ಸಿಬ್ಬಂದಿ, ಆ ತಲೆಕೂದಲುಗಳು ಸಿದ್ದಿಕ್ಕಿಯದ್ದು ಎಂದು ವರದಿ ನೀಡಿದ್ದಾರೆ~ ಎಂದು ಪ್ರಕರಣದ ತನಿಖಾಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ADVERTISEMENT

`ಪುಣೆ ಜೈಲಿನಲ್ಲಿದ್ದ ಸಿದ್ದಿಕಿ ಇತ್ತೀಚೆಗೆ ಸಹ ಕೈದಿಗಳಿಂದಲೆ ಕೊಲೆಯಾಗಿದ್ದ. ಬಾಂಬ್ ಸ್ಫೋಟ ಸಂಬಂಧ ತನಿಖಾಧಿಕಾರಿಗಳು ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಐದು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು. ಅವುಗಳಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಉಳಿದ ನಾಲ್ಕು ಪ್ರಕರಣಗಳ ತನಿಖೆ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಆರೋಪಪಟ್ಟಿ ಸಲ್ಲಿಸಲಾಗುವುದು~ ಎಂದು ಮಿರ್ಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.