ADVERTISEMENT

ಚಿನ್ನಾಭರಣ ದೋಚುತ್ತಿದ್ದ 6 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 4:55 IST
Last Updated 6 ಫೆಬ್ರುವರಿ 2012, 4:55 IST

ಬೆಂಗಳೂರು: ವೃದ್ಧರು ಮತ್ತು ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಇರಾನಿ ತಂಡದ ಆರು ಮಂದಿಯನ್ನು ಪಶ್ಚಿಮ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೀದರ್‌ನಲ್ಲಿರುವ ಇರಾನಿ ಕಾಲೊನಿ ಮೇಲೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿದ್ದ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ ಮತ್ತು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಸತೀಶ್ ಕುಮಾರ್ ಅವರ ತಂಡ ಮೂವತ್ತೈದು ಮಂದಿಯನ್ನು ಬಂಧಿಸಿತ್ತು.

`ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ವಿಭಾಗದಲ್ಲಿ ಈ ಹಿಂದೆ ನಡೆದಿದ್ದ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ವೃದ್ಧರು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ತಂಡದ ಸದಸ್ಯರು ಕೃತ್ಯ ಎಸಗುತ್ತಾರೆ. ಪೊಲೀಸರೆಂದು ಪರಿಚಯಿಸಿಕೊಳ್ಳುವ ಅವರು ಮುಂದೆ ಕೊಲೆಯಾಗಿದೆ, ಆದ್ದರಿಂದ ಆಭರಣಗಳನ್ನು ಬಿಚ್ಚಿಟ್ಟುಕೊಳ್ಳಿ ಎಂದು ಹೇಳಿ ಆಭರಣ ಬಿಚ್ಚಿದ ನಂತರ ಅದನ್ನು ಪಡೆದು ಪೇಪರ್‌ನಲ್ಲಿ ಸುತ್ತಿಕೊಟ್ಟಂತೆ ನಾಟಕವಾಡಿ ಆಭರಣ ದೋಚುತ್ತಾರೆ~  ಎಂದು ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಮಹಿಳೆಯರು ಇರುವ ಅಂಗಡಿಯನ್ನು ಗುರುತಿಸುವ ಇರಾನಿ ತಂಡದ ಸದಸ್ಯರು ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಅಲ್ಲಿಗೆ ಹೋಗುತ್ತಾರೆ. ಐನೂರು ರೂಪಾಯಿ ನೋಟು ನೀಡಿ ಇದನ್ನು ನಿಮ್ಮ ಚಿನ್ನದ ಸರಕ್ಕೆ ಮುಟ್ಟಿಸಿಕೊಟ್ಟರೆ ನಮಗೆ ಒಳಿತಾಗುತ್ತದೆ ಎಂದು ಹೇಳುತ್ತಾರೆ. ಆ ನಂತರ ಸರ ಕಿತ್ತುಕೊಂಡು ಪರಾರಿಯಾಗುತ್ತಾರೆ.

ನಗರದಲ್ಲಿ ಇತ್ತೀಚೆಗೆ ಇವರ ಹಾವಳಿ ಹೆಚ್ಚಾಗಿತ್ತು. ಚಿನ್ನದ ಬೆಲೆ ಹೆಚ್ಚಿರುವ ಕಾರಣ ಪದೇ ಪದೇ ಅವರು ಅಪರಾಧ ಎಸಗುತ್ತಿದ್ದರು. ಮುಗ್ಧ ಜನರನ್ನು ವಂಚಿಸುತ್ತಿದ್ದರು~ ಎಂದು ಅವರು ಮಾಹಿತಿ ನೀಡಿದರು. `ಈಗ ನಾವು ವಶಕ್ಕೆ ಪಡೆದಿರುವ ವ್ಯಕ್ತಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿಸ್ತೃತ ತನಿಖೆಯ ನಂತರ ಯಾವ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಲಿದೆ~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.