ADVERTISEMENT

ಚುನಾವಣಾಧಿಕಾರಿ ಪ್ರವೇಶ: ಕಾಂಗ್ರೆಸ್ ಸಭೆ ಮೊಟಕು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಆರ್.ರೋಷನ್ ಬೇಗ್ ಅವರು ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆಸುತ್ತಿದ್ದ ಸಭೆ ಯುವ ಕಾಂಗ್ರೆಸ್ ಚುನಾವಣಾ ಅಧಿಕಾರಿ ವಿ.ಕೆ. ಅರಿವಳಗನ್ ಅವರ ಮಧ್ಯಪ್ರವೇಶದ ಕಾರಣ ಹಠಾತ್ ಆಗಿ ಮೊಟಕುಗೊಂಡ ಘಟನೆ ನಡೆದಿದೆ.

ರೋಷನ್ ಬೇಗ್ ಅವರು ಯುವ ಕಾಂಗ್ರೆಸ್‌ನ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರ ಪರವಾಗಿ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಚುನಾವಣಾ ಸಭೆ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅರಿವಳಗನ್ ಅವರು ರೋಷನ್ ಬೇಗ್ ಅವರು ನಡೆಸುತ್ತಿದ್ದ ಸಭೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಅರಿವಳಗನ್ ಅವರು ಸಭೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಕೆಲವೇ ನಿಮಿಷಗಳಲ್ಲಿ ರೋಷನ್ ಬೇಗ್ ಅವರು ಸಭೆಯನ್ನು ಮೊಟಕುಗೊಳಿಸಿದರು ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅರಿವಳಗನ್, `ಯಾವುದೇ ಚುನಾಯಿತ ಪ್ರತಿನಿಧಿ ಯುವ ಕಾಂಗ್ರೆಸ್ ಚುನಾವಣೆಗೆ ಸಂಬಂಧಿಸಿ ಸಭೆ ನಡೆಸುವಂತಿಲ್ಲ. ಯುವ ಕಾಂಗ್ರೆಸ್ ಚುನಾವಣಾ ನೀತಿಸಂಹಿತೆ ಇದಕ್ಕೆ ಅವಕಾಶ ನೀಡುವುದಿಲ್ಲ~ ಎಂದು ತಿಳಿಸಿದರು.

`ನಾನು ಯಾವುದೇ ಚುನಾವಣಾ ಸಭೆ ನಡೆಸಿಲ್ಲ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಎಲ್ಲ ಸದಸ್ಯರೂ ಮತದಾನ ಮಾಡಲಿ ಎಂದು ಜಾಗೃತಿ ಮೂಡಿಸುವ ಉದ್ದೇಶದ ಸಭೆ ಮಾಡಿದ್ದೆ~ ಎಂದು ರೋಷನ್ ಬೇಗ್ ಘಟನೆಯ ಕುರಿತು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.