ADVERTISEMENT

ಚುಮು ಚುಮು ಚಳಿಗೆ ತುಂತುರು ಮಳೆಯ ಸಿಂಚನ...

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 15:41 IST
Last Updated 5 ಡಿಸೆಂಬರ್ 2012, 15:41 IST

ಬೆಂಗಳೂರು: ಈಶಾನ್ಯ ಹಿಂಗಾರಿನಿಂದ ಕೊರೆವ ಚಳಿಯಲ್ಲಿಯೂ ನಗರದ ಅಲ್ಲಲ್ಲಿ ಮಂಗಳವಾರ ತುಂತುರು ಮಳೆಯಾಯಿತು. ಬೆಳಿಗ್ಗೆಯಿಂದಲೇ ಮೋಡ ದಟ್ಟೈಸಿತ್ತು. ಇದಲ್ಲದೇ ತಂಪಾದ ಗಾಳಿ ಹಾಗೂ ತುಂತುರು ಮಳೆಯಿಂದಾಗಿ ಡಿಸೆಂಬರ್‌ನ ಚಳಿ ಮತ್ತಷ್ಟು ತೀವ್ರಗೊಂಡ ವಾತವಾರಣ ಕಂಡುಬಂತು.

ಬಂಗಾಳ ಕೊಲ್ಲಿಯಿಂದ ಅರಬ್ಬಿಸಮುದ್ರಕಡೆಗೆ ಮಾರುತಗಳು ತೀವ್ರವಾಗಿ ಬೀಸುತ್ತಿರುವುದರಿಂದ ನಗರದ ಹಲವೆಡೆ ಸಾಧಾರಣದಿಂದ ಮಧ್ಯಮ ಪ್ರಮಾಣದಲ್ಲಿ ಮಳೆಯಾಯಿತು. ಮೈನಡಗಿಸುವ ಚಳಿಯಲ್ಲಿಯೇ ನಗರದ ಜನತೆ ಕೊಡೆಗಳನ್ನು ಹಿಡಿದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.

ಅನಿರೀಕ್ಷಿತ ಮಳೆಗೆ ಎಂ.ಜಿ.ರಸ್ತೆ, ಫ್ರೇಜರ್ ಟೌನ್, ಕನಕಪುರ ರಸ್ತೆ, ವಿಜಯನಗರ, ಮೈಸೂರು ರಸ್ತೆ, ಚಾಮರಾಜಪೇಟೆ ಸೇರಿದಂತೆ  ಹಲವೆಡೆ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾದರೆ, ಮತ್ತೊಂದೆಡೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನ ತೀವ್ರ ತೊಂದರೆ ಅನುಭವಿಸಿದರು.

ನಗರದಲ್ಲಿ 15.1 ಮಿ.ಮೀ. ಮಳೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ 10.2 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಬ್ಬನ್ ಉದ್ಯಾನ, ಶೇಷಾದ್ರಿ ರಸ್ತೆ, ಅರಮನೆ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಇದರಿಂದ ಕೆಲ ಕಾಲ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.

ಜೀವನಹಳ್ಳಿ, ದೊಮ್ಮಲೂರು ಮೇಲ್ಸೇತುವೆಯ ಕೆಳಭಾಗದಲ್ಲಿ ನೀರು ನಿಂತ ಪರಿಣಾಮ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಆನಂತರ ಪಾಲಿಕೆ ಮತ್ತು ಜಲಮಂಡಳಿಯ ಎಂಜಿನಿಯರ್‌ಗಳು ಕಾರ್ಯಾಚರಣೆ ನಡೆಸಿ ಸಂಚಾರ ಸುಗಮಗೊಳಿಸಿದರು. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನರು  ತೊಂದರೆ ಅನುಭವಿಸುವಂತಾಯಿತು. ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಕೃಷಿ ಹವಾಮಾನ ವಿಭಾಗದ ಪ್ರೊ. ಎಂ.ಬಿ.ರಾಜೇಗೌಡ, `ಹಿಂಗಾರುವಿನ ಗುಣಲಕ್ಷಣಗಳು ಡಿಸೆಂಬರ್‌ನ ಅಂತ್ಯದವರೆಗೆ ಇರುತ್ತದೆ. ಕೋಲಾರ ಭಾಗದಿಂದ ಆರಂಭಗೊಂಡಿರುವ ಈ ಮಳೆಯು ಮುಂದಿನ ಮೂರು ದಿನಗಳು ಸಹ ಸುರಿಯುವ ಸಾಧ್ಯತೆಯಿದೆ' ಎಂದು ತಿಳಿಸಿದರು.

` ಮೋಡಗಳು ಸಾಂದ್ರಗೊಳ್ಳದೇ ಹೋದರೆ ಚಳಿಯ ತೀವ್ರತೆಯಿರುತ್ತದೆ. ಕೊರೆವ ಚಳಿ, ತೀವ್ರ ಗಾಳಿ ಹಾಗೂ ತುಂತುರು ಮಳೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು. ಆದರೆ, ಹಿಂಗಾರು ಬೆಳೆ ಬಿತ್ತಿದ ರೈತರಿಗೆ ಮಳೆಯಿಂದ ಅನುಕೂಲವಾಗುತ್ತದೆ' ಎಂದು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.