ADVERTISEMENT

ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೆರೆಸಿಕ್ಕ ಜೋತಿಷಿ

ಭವಿಷ್ಯ ಕೇಳಲು ಬಂದ ಯುವತಿ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:38 IST
Last Updated 15 ಮಾರ್ಚ್ 2014, 19:38 IST

ಬೆಂಗಳೂರು: ಭವಿಷ್ಯ ಕೇಳಲು ಬಂದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿದ ಜೋತಿಷಿ­ಯೊಬ್ಬ, ಆಕೆಯೊಂದಿಗೆ  ದೈಹಿಕ ಸಂಪರ್ಕ ಬೆಳೆಸಿ ಗರ್ಭವತಿ ಮಾಡಿರುವ ಘಟನೆ ಮಹದೇವಪುರ­ದಲ್ಲಿ ನಡೆದಿದೆ. 

ತಲೆಮರೆಸಿಕೊಳ್ಳಲು ಮಲೇಷ್ಯಾಗೆ ತೆರಳುತ್ತಿದ್ದ ಆತ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ರಾಮಮೂರ್ತಿನಗರ ಸಮೀಪದ ವೆಂಕಟ­ಸ್ವಾಮಪ್ಪ ಬಡಾವಣೆ ನಿವಾಸಿ ಯುಗೇಂದರ್‌ ಅಲಿಯಾಸ್ ಶಿವಕುಮಾರ ಸ್ವಾಮಿ (25) ಬಂಧಿತ ಜೋತಿಷಿ. ಮೂಲತಃ ಕೋಲಾರದವನಾದ ಆತ, ಐದು ವರ್ಷಗಳಿಂದ ಮಹದೇವಪುರ ಸಮೀಪದ ಉದಯನಗರದಲ್ಲಿ ಮಳಿಗೆ ಬಾಡಿಗೆ ಪಡೆದು ‘ಶ್ರೀ ಮೂಕಾಂಬಿಕ ಜೋತಿಷಾಲಯ’ ಎಂಬ ಹೆಸರಿನಲ್ಲಿ ಜೋತಿಷ್ಯ ಹೇಳುತ್ತಿದ್ದ.

ಆತ ಮದುವೆಯಾಗುವುದಾಗಿ ನಂಬಿಸಿ ವಂಚಿಸಿ­ದ್ದಾಗಿ ಯುವತಿಯೊಬ್ಬಳು ಮಾ.4ರಂದು ದೂರು ನೀಡಿದ್ದಳು. ದೂರಿನ ಅನ್ವಯ ಮಾ.6ರಂದು ಮಲೇಷ್ಯಾಗೆ ಹೋಗುತ್ತಿದ್ದ ಆರೋಪಿಯನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ದೂರು ನೀಡಿದ ಯುವತಿ ಆರೋಪಿಯ ಮಳಿಗೆ ಪಕ್ಕದಲ್ಲೇ ಪೋಷಕರ ಜತೆ ವಾಸವಾಗಿದ್ದಳು. 2010ರ ಜೂನ್‌ ತಿಂಗಳಲ್ಲಿ ಮೊದಲ ಬಾರಿಗೆ ಜೋತಿಷಾಲಯಕ್ಕೆ ಹೋದ ಆಕೆ, ‘ಮನೆಯಲ್ಲಿ ಹಣಕಾಸಿನ ತೊಂದರೆ ಇದೆ. ಸಮಸ್ಯೆಯನ್ನು ಪರಿಹರಿಸಿಕೊಡಿ’ ಎಂದು ಜೋತಿಷಿಯಲ್ಲಿ ಕೋರಿದ್ದಳು.

ನೆರವು ನೀಡುವುದಾಗಿ ನಂಬಿಸಿದ ಆತ ಯುವತಿಯೊಂದಿಗೆ ಸ್ನೇಹ ಸಂಪಾದಿಸಿದ. ಕ್ರಮೇಣ ಅವರಿಬ್ಬರು ಹೆಚ್ಚು ಆಪ್ತರಾದರು. ಆದರೆ, ಯುವತಿ 2010ರ ಅಕ್ಟೋಬರ್‌ನಲ್ಲಿ ಜೋತಿ­ಷಾಲಯಕ್ಕೆ ಹೋದಾಗ ಅತ್ಯಾಚಾರ ಎಸಗಿದ್ದ.

ಈ ವಿಷಯವನ್ನು ಬಹಿರಂಗಪಡಿಸದಂತೆ ಮನವಿ ಮಾಡಿಕೊಂಡ ಆತ, ‘ತಾಯಿ ಮಲೇಷ್ಯಾದಲ್ಲಿ­ದ್ದಾಳೆ. ಆಕೆ ನಗರಕ್ಕೆ ಬಂದ ಕೂಡಲೇ ಒಪ್ಪಿಗೆ ಪಡೆದು ಮದುವೆಯಾಗುತ್ತೇನೆ’ ಎಂದು ನಂಬಿಸಿದ್ದ. ಆ ನಂತರ ಸಹ ಅವರಿಬ್ಬರ ನಡುವೆ ಲೈಂಗಿಕ ಸಂಪರ್ಕ ಮುಂದುವರಿದಿತ್ತು. ಈ ನಡುವೆ 2013ರ ಅಕ್ಟೋಬರ್‌ನಲ್ಲಿ ಆಕೆ ಗರ್ಭಿಣಿಯಾಗಿ­ದ್ದಾಳೆ. ಆಗ ಗಾಬರಿಯೊಂಡ ಜೋತಿಷಿ, ‘ಈಗಲೇ ಮಗು ಬೇಡ’ ಎಂದು ಆಕೆಗೆ ಸಾಂತ್ವನ ಹೇಳುವ ನಾಟಕವಾಡಿ ಬೌರಿಂಗ್‌ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೂರು ತಿಂಗಳ ಹಿಂದೆ ಆತನ ತಾಯಿ ಭಾನು­ಮತಿ, ಮಲೇಷ್ಯಾದಿಂದ ನಗರಕ್ಕೆ ಬಂದಿದ್ದಾರೆ. ಈ ವಿಷಯ ತಿಳಿದ ಯುವತಿ, ನಡೆದ ಘಟನೆಯನ್ನು ಅವರಿಗೆ ತಿಳಿಸಿ ಮದುವೆ ಪ್ರಸ್ತಾವವನ್ನು ಮುಂದಿಟ್ಟಿ­ದ್ದಾಳೆ. ಆದರೆ, ಮದುವೆಗೆ ಒಪ್ಪದ ತಾಯಿ ಮಗನಿಗೆ ಬೇರೊಂದು ಯುವತಿ ಜತೆ ಮದುವೆ ಮಾಡಿ­ದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ದೂರು ನೀಡಿದ ಯುವತಿ, ಆರೋ­ಪಿಯು ಮಾ.6ರಂದು ತಾಯಿ ಜತೆ ಮಲೇಷ್ಯಾಗೆ ಹೋಗುತ್ತಿರುವುದಾಗಿಯೂ ತಿಳಿಸಿದಳು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಲಾ­ಯಿತು.

ಮೊಬೈಲ್‌ ಕರೆಗಳ ಸುಳಿವಿನಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸ­ಲಾ­ಯಿತು. ಆರೋಪಿ ವಿರುದ್ಧ ಅತ್ಯಾಚಾರ (ಐಪಿಸಿ 376) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಹದೇವಪುರ ಪೊಲೀಸರು ಹೇಳಿದರು.

ಬಲವಂತವಾಗಿ ಮಾತ್ರೆ ನುಂಗಿಸಿದ
‘ಮೊದಲ ಬಾರಿಗೆ ಗರ್ಭಿಣಿಯಾದಾಗ ಯುಗೇಂದರ್‌ ಗರ್ಭಪಾತ ಮಾಡಿಸಿದ್ದ. 2014ರ ಫೆಬ್ರುವರಿಯಲ್ಲಿ ಎರಡನೇ ಬಾರಿಗೆ ಗರ್ಭಿಣಿಯಾದೆ. ಆಗ ಆತ ಬಲವಂತವಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ನುಂಗಿಸಿದ. ಹೆಚ್ಚು ಮಾತ್ರೆಗಳನ್ನು ನುಂಗಿಸಿದ್ದರಿಂದ ಅಸ್ವಸ್ಥಗೊಂಡು ನಾಲ್ಕು ದಿನಗಳ ಕಾಲ ಬೌರಿಂಗ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದೆ’ ಎಂದು ಯುವತಿ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.