ADVERTISEMENT

ಜಕ್ಕೂರು ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 20:17 IST
Last Updated 3 ಜುಲೈ 2013, 20:17 IST

ಯಲಹಂಕ: ಪದವಿಪೂರ್ವ ತರಗತಿಗಳು ಆರಂಭವಾಗಿ ಒಂದು ತಿಂಗಳು ಕಳೆದಿದೆ. ಈ ನಡುವೆ, ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಕ್ಕೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತೆರವಾಗಿರುವ ಉಪನ್ಯಾಸಕರ ಹುದ್ದೆಯನ್ನು ಭರ್ತಿ ಮಾಡದ ಪರಿಣಾಮ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಗ್ರಾಮೀಣ ಪ್ರದೇಶದ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಕಲಿಯುತ್ತಿರುವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಒಟ್ಟು 190 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಂದು ವರ್ಷದಿಂದ ಜೀವವಿಜ್ಞಾನ ವಿಷಯದ ಉಪನ್ಯಾಸಕರ ಹಾಗೂ ನಾಲ್ಕು ತಿಂಗಳಿಂದ ಆಂಗ್ಲಭಾಷೆ ವಿಷಯದ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಕೂಡಲೇ ಉಪನ್ಯಾಸಕರನ್ನು ಭರ್ತಿ ಮಾಡಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

`ಪದವಿಪೂರ್ವ ಶಿಕ್ಷಣದಲ್ಲಿ ಕೇಂದ್ರ ಪಠ್ಯಕ್ರಮ ಅಳವಡಿಸಿರುವುದರಿಂದ ವಿದ್ಯಾರ್ಥಿಗಳು ಈಗಾಗಲೇ ಒತ್ತಡದಲ್ಲಿದ್ದಾರೆ. ತರಗತಿಗಳು ಆರಂಭವಾಗಿ ಒಂದು ತಿಂಗಳು ಕಳೆದಿದೆ. ಪಕ್ಕದ ಕಾಲೇಜುಗಳಲ್ಲಿ ಈಗಾಗಲೇ ಶೇ 30ರಷ್ಟು ಪಠ್ಯಗಳು ಪೂರ್ಣಗೊಂಡಿವೆ.  ಕಾಲೇಜಿನಲ್ಲಿ ಆಂಗ್ಲಭಾಷೆ ಹಾಗೂ ಜೀವವಿಜ್ಞಾನದ ಉಪನ್ಯಾಸಕರ ಕೊರತೆ ಇದೆ' ಎಂದು ಪೋಷಕ ಲಕ್ಷ್ಮೀನಾರಾಯಣ ದೂರಿದರು.

ಪ್ರಾಂಶುಪಾಲರಾದ ಡಾ.ಎನ್.ವಿಜಯಲಕ್ಷ್ಮಿ ಪ್ರತಿಕ್ರಿಯಿಸಿ, `ಆಂಗ್ಲಭಾಷೆ ಉಪನ್ಯಾಸಕರು 2013ರ ಫೆಬ್ರವರಿ ತಿಂಗಳಲ್ಲಿ ಸ್ವಯಂನಿವೃತ್ತಿ ಹೊಂದಿದ್ದಾರೆ. ಜೀವವಿಜ್ಞಾನ ವಿಷಯದ ಉಪನ್ಯಾಸಕರು ಬಡ್ತಿ ಹೊಂದಿ, 2012ರ ಜೂನ್ ತಿಂಗಳಲ್ಲಿ ಬೇರೆ ಕಾಲೇಜಿಗೆ ವರ್ಗಾವಣೆಯಾಗಿದ್ದಾರೆ. ಈ ನಡುವೆ, ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನು ನಿಯೋಜನೆ ಆಧಾರದ ಮೇಲೆ ಕರೆಸಿಕೊಂಡು ಸಾಧ್ಯವಾದಷ್ಟು ಮಟ್ಟಿಗೆ ಪಾಠ-ಪ್ರವಚನಗಳನ್ನು ಪೂರ್ಣಗೊಳಿಸಲಾಗುತ್ತಿದೆ' ಎಂದರು.

`ತುರ್ತಾಗಿ ಉಪನ್ಯಾಸಕರನ್ನು ನಿಯೋಜನೆ ಮಾಡಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಆದಷ್ಟು ಶೀಘ್ರದಲ್ಲೇ ನೂತನ ಉಪನ್ಯಾಸಕರ ನಿಯೋಜನೆಯಾಗಲಿದೆ' ಎಂದು ಅವರು ತಿಳಿಸಿದರು.

`ಇಲಾಖೆಯು ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡುವವರೆಗೆ ಕೆಲಸದ ಒತ್ತಡ ಕಡಿಮೆಯಿರುವ ಕಾಲೇಜುಗಳ ಅಥವಾ ಅರೆಕಾಲಿಕ ಉಪನ್ಯಾಸಕರನ್ನು ಗುರುತಿಸಿ ನಿಯೋಜನೆ ಮೇರೆಗೆ ನೇಮಕ ಮಾಡಲಾಗುವುದು. ಈಗ ಉಪನ್ಯಾಸಕರು ಪಿಯುಸಿ ಪೂರಕ ಪರೀಕ್ಷಾ ಕಾರ್ಯದಲ್ಲಿ ತೊಡಗಿರುವುದರಿಂದ ಪರೀಕ್ಷೆ ಮುಗಿದ ಕೂಡಲೇ 15 ದಿನಗಳ ಒಳಗಾಗಿ ನಿಯೋಜನೆ ಮಾಡಲಾಗುವುದು' ಎಂದು ಇಲಾಖೆಯ ಬೆಂಗಳೂರು ಉತ್ತರ ಜಿಲ್ಲಾ ಉಪನಿರ್ದೇಶಕ ಜಿ.ಎನ್.ಈಶ್ವರಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.