ADVERTISEMENT

ಜಕ್ಕೂರು ಜೋಡಿ ರಸ್ತೆ: ಆಮೆಗತಿ ಕಾಮಗಾರಿ, ಜನರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST
ಜಕ್ಕೂರು ಜೋಡಿ ರಸ್ತೆ: ಆಮೆಗತಿ ಕಾಮಗಾರಿ, ಜನರಿಗೆ ಕಿರಿಕಿರಿ
ಜಕ್ಕೂರು ಜೋಡಿ ರಸ್ತೆ: ಆಮೆಗತಿ ಕಾಮಗಾರಿ, ಜನರಿಗೆ ಕಿರಿಕಿರಿ   

 ಯಲಹಂಕ: ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಕ್ಕೂರು ಬಡಾವಣೆ ಮೂಲಕ ಬಳ್ಳಾರಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಜೋಡಿರಸ್ತೆ ವಿಸ್ತರಣಾ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಪರಿಣಾಮ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಬಳ್ಳಾರಿ ಮುಖ್ಯರಸ್ತೆಯಿಂದ ಆರಂಭವಾಗಿ ಶ್ರೀರಾಮಪುರ, ಹೆಗ್ಗಡೆ ನಗರ, ನಾರಾಯಣಪುರ, ಕೊತ್ತನೂರು, ಬೈರತಿ, ಬಿಳೆಶಿವಾಲೆ ಮತ್ತಿತರ ಗ್ರಾಮಗಳ ಮೂಲಕ ಕೆ.ಆರ್.ಪುರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಬಿಬಿಎಂಪಿ ವತಿಯಿಂದ 3.60 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ವರ್ಷದ ಹಿಂದೆ ಕೈಗೆತ್ತಿಕೊಳ್ಳಲಾಯಿತು.

ಆದರೆ, ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದರೂ ಇದುವರೆಗೂ ಪೂರ್ಣಗೊಳ್ಳದೆ ವಾಹನ ಸವಾರರು ನಿತ್ಯವೂ ಬಿಬಿಎಂಪಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ಮೂಲಕ ಇದೇ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಇತ್ತೀಚೆಗೆ ಈ ಭಾಗದಲ್ಲಿ ಹಲವಾರು ಅಪಘಾತಗಳು ಸಂಭವಿಸಿ ಸಾವು-ನೋವುಗಳು ಉಂಟಾಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ರಸ್ತೆ ವಿಸ್ತರಣೆ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಸ್ಥಳೀಯರ ಆರೋಪ.  

ಈ ಕುರಿತು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ (ಯೋಜನೆ) ಸುರೇಂದ್ರಬಾಬು ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, `ವಿಮಾನ ತರಬೇತಿ ಶಾಲೆಯವರು ಈ ಹಿಂದೆ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಜಾಗ ಬಿಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ ಜಾಗ ಬಿಡುವುದಿಲ್ಲ ಎಂದು ಹೇಳುತ್ತಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಈ ಸಮಸ್ಯೆಯಿರುವ ಜಾಗ ಬಿಟ್ಟು ಉಳಿದ ಕಡೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.