ADVERTISEMENT

ಜನಮಾನಸಕ್ಕೆ ಜನಪದ ಕಲೆ, ಸಾಹಿತ್ಯ ತಲುಪಿಸಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ನೆಲಮಂಗಲ: `ಯಾಂತ್ರಿಕತೆ ಮತ್ತು ತಾಂತ್ರಿಕತೆಯ ಪ್ರಭಾವದಿಂದ ಅಳಿವಿನ ಅಂಚಿನಲ್ಲಿರುವ ಜನಪದ ಕಲೆಯ ಉಳಿವಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಬಳಸಿಕೊಂಡು ಜನಪದ ಕಲೆ, ಸಾಹಿತ್ಯ ಸಂಗೀತವನ್ನು ಜನಮಾನಸಕ್ಕೆ ಮುಟ್ಟಿಸುವಂತಾಗಬೇಕು~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಮಹದೇವಯ್ಯ ತಿಳಿಸಿದರು.

ಇಲ್ಲಿಗೆ ಸಮೀಪದ ರೈಲ್ವೆ ಗೊಲ್ಲಹಳ್ಳಿ ಬೈಲಾಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಚೇತನ ಗ್ರಾಮಾಭಿವೃದ್ಧಿ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ಯಾಕಲದೇವನಪುರದ ಜನಪದ ಸಾಂಸ್ಕೃತಿಕ ಕಲಾ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜನಪದ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ಹಿರಿಯ ಕಲಾವಿದರಾದ ಎನ್.ಕಾಂತರಾಜು, ಸುಶೀಲಮ್ಮ, ಕ್ರೀಡಾಪಟು ವಿ.ಮುನಿರಾಜು, ಎಸ್.ದಿನೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಜನಪದ ಕಲಾ ವಾಹಿನಿಯನ್ನು ಗುಡ್ಡದ ಆದಿಶಕ್ತಿ ಪೀಠದ ನರಸಿಂಹಮೂರ್ತಿ ಸ್ವಾಮೀಜಿ ಉದ್ಘಾಟಿಸಿದರು. ಕೀಲು ಕುದುರೆ, ಗೊರವರ, ಪೂಜಾ, ಸೋಮನ, ಡೊಳ್ಳು, ಪಟ ಕುಣಿತ ಪ್ರದರ್ಶಿಸಲಾಯಿತು. ಸುಗಮ ಸಂಗೀತ ವೈಭವವನ್ನು ಗಾಯಕ ಶ್ಯಾಕಲದೇವನಪುರ ರಾಮಚಂದ್ರ ಉದ್ಘಾಟಿಸಿದರು. ಗೀಗೀ, ಲಾವಣಿ, ತತ್ವಪದ, ಸೋಬಾನೆ, ಭಜನೆ, ಭರತನಾಟ್ಯ, ರಂಗ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಯಿತು. ಆರ್.ಸಿ.ರಾಮಲಿಂಗಯ್ಯ, ಅಬ್ಬಿಗೆರೆ ಗುರುರಾಜು, ಅನಂತರಾಮಯ್ಯ, ದೊಡ್ಡಹಳ್ಳಿ ರಮೇಶ್ ಉಪಸ್ಥಿತರಿದ್ದರು.

ರಥೋತ್ಸವ: ಗೊಲ್ಲಹಳ್ಳಿಯ ಬೈಲಾಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಭಕ್ತರು ಅರವಂಟಿಗೆ, ಕೊಪ್ಪಲುಗಳನ್ನು ಅಲ್ಲಲ್ಲಿ ನಿರ್ಮಿಸಿ ಭಕ್ತರಿಗೆ ಅನ್ನಸಂತರ್ಪಣೆ, ಪಾನಕ, ಕೋಸಂಬರಿಗಳನ್ನು ವಿತರಿಸಿದರು. ಸುತ್ತಮುತ್ತಲ ಹಳ್ಳಿಯ ಭಕ್ತರು ಅಲಂಕೃತ ಎತ್ತಿನಗಾಡಿಯಲ್ಲಿ ಆಗಮಿಸಿದ್ದರು. ಬೆಂಗಳೂರು, ತುಮಕೂರು ಮತ್ತು ದೂರದೂರುಗಳಿಂದ ಭಕ್ತರು ಆಗಮಿಸಿದ್ದರು. ರಥೋತ್ಸವದಿಂದ ದೊಡ್ಡಬಳ್ಳಾಪುರ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.