ADVERTISEMENT

`ಜನಮಾನಸದಲ್ಲಿ ಉಳಿದ ರಾಜ್'

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:56 IST
Last Updated 21 ಏಪ್ರಿಲ್ 2013, 19:56 IST
ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾದ ಲಕ್ಷ್ಮೀ ಶ್ರೀನಿವಾಸ ಅವರು ರಚಿಸಿರುವ `ಕರ್ನಾಟಕ ರತ್ನ ಡಾ.ರಾಜಕುಮಾರ್' ಕಿರುಪುಸ್ತಕವನ್ನು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಹಿರಿಯ ನಟ ರಾಜೇಶ್, ಉದ್ಯಮಿ ಕೆ.ಮೋಹನ್‌ರಾವ್ ಅವರು ವೀಕ್ಷಿಸಿದರು 	-ಪ್ರಜಾವಾಣಿ ಚಿತ್ರ
ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾದ ಲಕ್ಷ್ಮೀ ಶ್ರೀನಿವಾಸ ಅವರು ರಚಿಸಿರುವ `ಕರ್ನಾಟಕ ರತ್ನ ಡಾ.ರಾಜಕುಮಾರ್' ಕಿರುಪುಸ್ತಕವನ್ನು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಹಿರಿಯ ನಟ ರಾಜೇಶ್, ಉದ್ಯಮಿ ಕೆ.ಮೋಹನ್‌ರಾವ್ ಅವರು ವೀಕ್ಷಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: `ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಿದ್ದ ನಮ್ಮ ತಲೆಮಾರಿನ ಮಹಾನ್ ನಟ ಡಾ.ರಾಜ್‌ಕುಮಾರ್' ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಬಣ್ಣಿಸಿದರು.

ಕನ್ನಡ ಜನಶಕ್ತಿ ಕೇಂದ್ರ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಲಕ್ಷ್ಮೀ ಶ್ರೀನಿವಾಸ ಅವರು ರಚಿಸಿರುವ `ಕರ್ನಾಟಕ ರತ್ನ ಡಾ.ರಾಜಕುಮಾರ್' ಕಿರುಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ರಾಜ್ ಅವರು ಸಮಾಜದ ಸಾಮಾನ್ಯ ವ್ಯಕ್ತಿಯಿಂದಲೂ ಗೌರವಕ್ಕೆ ಪಾತ್ರರಾಗ್ದ್ದಿದರು. ವೀರಪ್ಪನ್‌ನಂತಹ ಕ್ರೂರಿ ಕೂಡ ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದ ಸಂದರ್ಭದಲ್ಲಿ ಅವರಲ್ಲಿನ ಮುಗ್ಧತೆ ಕಂಡು ರಾಜ್ ಅವರನ್ನು ಸಭ್ಯವಾಗಿ ನಡೆಸಿಕೊಂಡಿದ್ದ. ಅಭಿನಯದ ಜತೆಗೆ ಅವರಲ್ಲಿದ್ದ ಮುಗ್ಧತೆ, ಸರಳತೆ, ಸಜ್ಜನಿಕೆ ಹಾಗೂ ಮಾನವೀಯ ಗುಣಗಳಿಂದಾಗಿ ಜನಮಾನಸದಲ್ಲಿ ಅವರು ಅಚ್ಚಳಿಯದೇ ಉಳಿದಿದ್ದಾರೆ' ಎಂದು ಹೇಳಿದರು.

ಹಿರಿಯ ನಟ ರಾಜೇಶ ಮಾತನಾಡಿ, `ರಾಜ್‌ಕುಮಾರ್ ಒಬ್ಬ ಸುಸಂಸ್ಕೃತ ನಟ. ಸಿನಿಮಾಗಳಲ್ಲಿ ಅವರು ಬಳಸುತ್ತಿದ್ದುದು ಶುದ್ಧ ಭಾಷೆ. ರಾಜ್ ಇಂದಿನ ಕಲಾವಿದರಿಗೆ ಮಾದರಿ' ಎಂದರು.

`ರಾಜ್‌ಕುಮಾರ್ ಅವರ ಚಿತ್ರಗಳನ್ನು ಮುಜುಗರವಿಲ್ಲದೇ ಕುಟುಂಬದ ಸದಸ್ಯರೆಲ್ಲರು ಒಟ್ಟಾಗಿ ವೀಕ್ಷಿಸಬಹುದು. ಅವುಗಳಲ್ಲಿ ಮನರಂಜನೆಯ ಜತೆಗೆ ಸಾಮಾಜಿಕ ಸಂದೇಶವಿರುತ್ತಿತ್ತು' ಎಂದ ಅವರು ಭಕ್ತ ಪ್ರಹ್ಲಾದ, ಮಯೂರ, ಬೇಡರಕಣ್ಣಪ್ಪ, ಬಂಗಾರದ ಮನುಷ್ಯ ಚಿತ್ರಗಳಲ್ಲಿನ ರಾಜ್‌ಕುಮಾರ್ ಅವರ ಅಭಿಯನವನ್ನು ಸ್ಮರಿಸಿಕೊಂಡರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, `ಕನ್ನಡದ ವಿಷಯದಲ್ಲಿ ರಾಜ್‌ಕುಮಾರ್ ಮತ್ತು ವಾಟಾಳ್ ನಾಗರಾಜ್ ನನ್ನ ಆದರ್ಶ. ಇಬ್ಬರು ಬೇರೆ ಬೇರೆ ಮಾರ್ಗಗಳ ಮೂಲಕ ಕನ್ನಡ ಉಳಿವಿಗೆ ಕೆಲಸ ಮಾಡಿದ್ದಾರೆ' ಎಂದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕೃತಿಯ ಲೇಖಕ ಲಕ್ಷ್ಮೀ ಶ್ರೀನಿವಾಸ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.