ADVERTISEMENT

ಜನರಿಂದ ಒತ್ತಡ ಬಂದರೆ ಕಾಯ್ದೆಗೆ ತಿದ್ದುಪಡಿ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 20:28 IST
Last Updated 24 ಅಕ್ಟೋಬರ್ 2017, 20:28 IST

ಬೆಂಗಳೂರು: ಸಾರ್ವಜನಿಕರಿಂದ ಒತ್ತಡ ಬಂದರೆ ನೂರು ಸಿ.ಸಿ ಗಿಂತ ಕಡಿಮೆ ಸಾಮರ್ಥ್ಯ ಇರುವ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿ ನಿಷೇಧಿಸುವ ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದರು.

ಈಗಾಗಲೇ ಖರೀದಿಸಿರುವ ನೂರು ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ. ಹೈಕೋರ್ಟ್ ಆದೇಶದ ಅನುಸಾರ ನೂರು ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯ ಇರುವ ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ನಿಷೇಧಿಸಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಅವರು ತಿಳಿಸಿದರು.

ನೂರು ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರವಾಹನಗಳು ಅಪಘಾತವಾದಾಗ ಹಿಂಬದಿ ಸವಾರರು ಮೃತಪಟ್ಟಿರುವ ಪ್ರಕರಣಗಳು ಹೆಚ್ಚಾಗಿದ್ದವು. ಈ ಕಾರಣಕ್ಕಾಗಿ ಕರ್ನಾಟಕ ಮೋಟಾರು ವಾಹನ ನಿಯಮ 143(3) ಪ್ರಕಾರ ಕ್ರಮ ಕೈಗೊಂಡು, ಹಿಂಬದಿ ಸವಾರಿ ನಿಷೇಧಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಇದು ಸೂಕ್ತ ಕ್ರಮ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಚರ್ಚೆ ನಡೆದು, ನಿಷೇಧ ತೆರವು ಮಾಡಬೇಕು ಎಂಬ ಬೇಡಿಕೆ ವ್ಯಕ್ತವಾದರೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದೂ ಅವರು ಹೇಳಿದರು.

ADVERTISEMENT

ಹಿಂಬದಿ ಸೀಟು ಹೊಂದಿರುವ 100 ಸಿ.ಸಿಗಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳ ಮಾರಾಟ ಮತ್ತು ನೋಂದಣಿ ನಿಷೇಧ ಮಾಡಿಲ್ಲ. ಇಂತಹ ವಾಹನಗಳಲ್ಲಿ ಇಬ್ಬರು ಸವಾರಿ ಮಾಡುವುದನ್ನು ನಿಷೇಧಿಸುವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಟ್ಯಾಕ್ಸಿ ಮಾಲೀಕರಿಗೆ ಸಿಹಿ ಸುದ್ದಿ:

‘ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಗಳಿಗೆ ಮಾಲೀಕರಿಗೆ ಸದ್ಯವೇ ಸಿಹಿಸುದ್ದಿ ನೀಡುತ್ತೇನೆ’ ಎಂದು ರೇವಣ್ಣ ಹೇಳಿದರು.

ಈ ವಾಹನಗಳಿಗೆ ಸ್ಪೀಡ್ ಗವರ್ನರ್‌ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶದ ಕುರಿತು ಪ್ರತಿಕ್ರಿಯಿಸಿದ ಅವರು, ‘ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವಾಲಯದ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚಿಸಲು ನಮ್ಮ ಅಧಿಕಾರಿಗಳು ದೆಹಲಿಗೆ ಹೋಗಿದ್ದಾರೆ. ಅವರು ವಾಪಸ್‌ ಬಂದ ಬಳಿಕ ಸ್ಪೀಡ್ ಗವರ್ನರ್‌ ಕಡ್ಡಾಯಗೊಳಿಸಿರುವ ಕುರಿತು ಮತ್ತೊಮ್ಮೆ ಚರ್ಚಿಸಿ, ಅನುಕೂಲಕಾರಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.