ADVERTISEMENT

ಜಪಾನ್ ನೆರವಿನಲ್ಲಿ ಪೆರಿಫೆರಲ್ ರಸ್ತೆ

ಸಚಿವ ಸಂಪುಟದಿಂದ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 20:26 IST
Last Updated 6 ಸೆಪ್ಟೆಂಬರ್ 2013, 20:26 IST

ಬೆಂಗಳೂರು: ಬೆಂಗಳೂರಿನಲ್ಲಿ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಿಸುವ ಯಅಜನೆಯನ್ನು ಜಪಾನ್ ಅಂತರರಾಷ್ಟ್ರೀಯ ಸಹಕಾರ ಏಜೆನ್ಸಿ (ಜೈಕಾ) ನೆರವಿನಲ್ಲಿ ಅನುಷ್ಠಾನಕ್ಕೆ ತರುವ ಪ್ರಸ್ತಾವಕ್ಕೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

`65 ಕಿ.ಮೀ. ಉದ್ದದ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ 5,800 ಕೋಟಿ ರೂಪಾಯಿ ವೆಚ್ಚವಾಗಲಿದೆ. ಹಣಕಾಸು ನೆರವು ಕೋರಿ ಜೈಕಾಗೆ ಸಲ್ಲಿಸಲು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ಒಪ್ಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಂಪುಟ ಸಭೆಯ ಬಳಿಕ ಪತ್ರಕರ್ತರಿಗೆ ತಿಳಿಸಿದರು.

ಈ ಯೋಜನೆಯಡಿ ನಗರವನ್ನು ಸುತ್ತುವರಿಯುವ ಆರರಿಂದ ಎಂಟು ಪಥಗಳ ರಸ್ತೆ ನಿರ್ಮಿಸಲಾಗುವುದು. ಹೈದರಾಬಾದ್ ಮಾದರಿಯಲ್ಲೇ ಯೋಜನೆ ಜಾರಿಗೊಳಿಸಲಾಗುವುದು. ಇದು ನಗರದ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ದಾರಿಯಾಗಲಿದೆ ಎಂದರು.

ಬೆಂಗಳೂರಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಮೇಲುಸೇತುವೆ ನಿರ್ಮಿಸುವ ಕಾಮಗಾರಿಯ ಪರಿಷ್ಕೃತ ಟೆಂಡರ್‌ಗೆ ಸಂಪುಟ ಒಪ್ಪಿಗೆ ನೀಡಿದೆ. ಎಂ.ವೆಂಕಟರಾವ್ ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್ ಕಂಪೆನಿಯು 35.80 ಕೋಟಿ ರೂಪಾಯಿ ಮೊತ್ತದ ಬಿಡ್ ಸಲ್ಲಿಸಿತ್ತು. ಇದು ಸದ್ಯದ `ಸ್ಟ್ಯಾಂಡರ್ಡ್ ದರ'ಕ್ಕಿಂತಲೂ ಹೆಚ್ಚಿತ್ತು. ಆದರೆ, ಯೋಜನೆ ಜಾರಿ ಅನಿವಾರ್ಯವಾಗಿದೆ. ಆದ್ದರಿಂದ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಏರೋಸ್ಪೇಸ್ ನೀತಿ: ಏರೋಸ್ಪೇಸ್ ಉದ್ಯಮದಲ್ಲಿ ಹೂಡಿಕೆ ಆಕರ್ಷಿಸಲು ಹೊಸ `ಅಂತರಿಕ್ಷ ನೀತಿ' ರೂಪಿಸಲು ಸರ್ಕಾರ ತೀರ್ಮಾನಿಸಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಹೂಡಿಕೆದಾರರು ನಗರದಲ್ಲಿ ಏರೋಸ್ಪೇಸ್ ಉದ್ಯಮದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಹೂಡಿಕೆ ಆಕರ್ಷಣೆಗೆ ಪೂರಕವಾಗಿ ಹೊಸ ನೀತಿ ರೂಪಿಸಲಾಗುವುದು.

ದೇವನಹಳ್ಳಿ ಬಳಿ ಏರೋಸ್ಪೇಸ್ ಪಾರ್ಕ್ ಸ್ಥಾಪಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದಕ್ಕಾಗಿ 9 ಕೋಟಿ ರೂಪಾಯಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಕಾಯ್ದೆ ತಿದ್ದುಪಡಿ: `ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ನೀಡಲು ಪೂರಕವಾಗಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಐದು ಮಂದಿ ಆರೋಗ್ಯ ವಿಜ್ಞಾನಗಳ ಪದವೀಧರರನ್ನು ಸೆನೆಟ್ ಸದಸ್ಯರನ್ನಾಗಿ ನೇಮಿಸುವ ಪ್ರಸ್ತಾವಕ್ಕೂ ಒಪ್ಪಿಗೆ ನೀಡಲಾಗಿದೆ. ಈ ಸಂಬಂಧ ಶೀಘ್ರದಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗುವುದು' ಎಂದು ತಿಳಿಸಿದರು.

ವಿಶೇಷ ಏನು
ನಗರದ ಸುತ್ತ 65 ಕಿಮಿ ರಸ್ತೆ

6 ರಿಂದ 8 ಪಥ

ರೂ5800 ಕೋಟಿ ಖರ್ಚು

ಸಂಚಾರ ಸಮಸ್ಯೆಗೆ ಪರಿಹಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.