ಬೆಂಗಳೂರು: ಹಲವು ವರ್ಷಗಳ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಜಾಗ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ನಗರದ ಉತ್ತರ ಭಾಗದ ಜಕ್ಕೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಲೆಯೆತ್ತಲಿರುವ ಈ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ 16 ಗ್ರಾಮಗಳ ಸುಮಾರು 1,100 ಎಕರೆ ಜಾಗವನ್ನು ವಶಪಡಿಸಿಕೊಂಡಿದೆ.
ಆದರೆ, ಸರ್ಕಾರ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ರೈತರು ಮೊದಲು ಒಪ್ಪದ ಕಾರಣ ಅರ್ಕಾವತಿ ಬಡಾವಣೆ ನಿರ್ಮಾಣ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ, ಹಲವು ಸುತ್ತಿನ ಮಾತುಕತೆ ಹಾಗೂ ಸಂಧಾನದ ಫಲವಾಗಿ ಸರ್ಕಾರ ಭೂಮಿ ಕಳೆದುಕೊಂಡಂತಹ ರೈತರಿಗೆ ಅಭಿವೃದ್ಧಿಪಡಿಸಿದ ಶೇ 40ರಷ್ಟು ಜಾಗವನ್ನು ನೀಡಲು ಒಪ್ಪಿಗೆ ಸೂಚಿಸಿತು.
ಈ ನಡುವೆ, ಬಿಡಿಎ ಬುಧವಾರ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೂ ಭೂಮಿ ಪೂಜೆ ನೆರವೇರಿಸಿತು. ಬೆಳಿಗ್ಗೆ ಬಿಡಿಎ ಮುಖ್ಯ ಎಂಜಿನಿಯರ್ ಹಾಗೂ ಇತರರು ಬಡಾವಣೆ ನಿರ್ಮಾಣ ಸ್ಥಳಕ್ಕೆ ತೆರಳಿ ರೈತರೊಂದಿಗೆ ಮಾತುಕತೆ ನಡೆಸಿದರು.
ಅಭಿವೃದ್ಧಿಪಡಿಸಿದ ಶೇ 40ರಷ್ಟು ಭೂಮಿಯನ್ನು ನೀಡಲು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಬಿಡಿಎ ಅಧಿಕಾರಿಗಳು ಜಾಗ ನೀಡಿದ ರೈತರನ್ನು ಕೋರಿದರು. ಅದಕ್ಕೆ ರೈತರು ಕೂಡ ಸಮ್ಮತಿ ಸೂಚಿಸಿದರು.
ಬಿಡಿಎ ಅಧಿಕಾರಿಗಳ ಪ್ರಕಾರ, ಒಂದು ಎಕರೆ ಜಾಗ ನೀಡಿದಂತಹ ರೈತರಿಗೆ ಒಂಬತ್ತು ಸಾವಿರ ಚದರ ಅಡಿಗಳಷ್ಟು ಅಭಿವೃದ್ಧಿಪಡಿಸಿದ ಜಾಗ ನೀಡಲಾಗುತ್ತದೆ.
ಸುಮಾರು ನಾಲ್ಕು ಸಾವಿರ ರೈತರು ಬಡಾವಣೆ ನಿರ್ಮಾಣಕ್ಕಾಗಿ ಜಾಗ ನೀಡಿದ್ದು, ಸುಮಾರು ಎಂಟು ಸಾವಿರ ಫಲಾನುಭವಿಗಳಿಗೆ ಬಿಡಿಎ ನಿವೇಶನ/ ಮನೆಗಳನ್ನು ಹಂಚಿಕೆ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.