ADVERTISEMENT

ಜಮೀರ್–ಇಬ್ರಾಹಿಂ ಭೇಟಿಗೆ ವಿಶೇಷ ಅರ್ಥ ಬೇಡ:ದೇವೇಗೌಡ

​ಪ್ರಜಾವಾಣಿ ವಾರ್ತೆ
Published 24 ಜನವರಿ 2016, 20:05 IST
Last Updated 24 ಜನವರಿ 2016, 20:05 IST
ಕಾರ್ಯಕ್ರಮದಲ್ಲಿ ಉಪ್ಪಾರ ಸಂಘದ ಸದಸ್ಯರಿಗೆ ಎಚ್‌.ಡಿ. ದೇವೇಗೌಡ ಅವರು ವಂದಿಸಿದರು
ಕಾರ್ಯಕ್ರಮದಲ್ಲಿ ಉಪ್ಪಾರ ಸಂಘದ ಸದಸ್ಯರಿಗೆ ಎಚ್‌.ಡಿ. ದೇವೇಗೌಡ ಅವರು ವಂದಿಸಿದರು   

ಬೆಂಗಳೂರು: ‘ಜೆಡಿಎಸ್ ಶಾಸಕ ಜಮೀರ್ ಅಹಮ್ಮದ್‌ ಮತ್ತು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಭೇಟಿ ಸೌಹಾರ್ದಯುತವಾದದ್ದು, ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದರು.

ರಾಜ್ಯ ಉಪ್ಪಾರ ಸಂಘ, ಉಪ್ಪಾರ ಕ್ಷೇಮಾಭಿವೃದ್ಧಿ, ವಿವಿಧೋದ್ದೇಶ ಮತ್ತು ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಸಿ.ಕೆ.ಜಾಫರ್ ಷರೀಫ್ ಅವರ ಮೊಮ್ಮಗ ನನ್ನನ್ನು ಸಂಪರ್ಕಿಸಿಲ್ಲ. ಜಾಫರ್ ಷರೀಫ್ ಅವರು ಜೆಡಿಎಸ್ ಸೇರುತ್ತಾರೆ ಎಂಬುದು ಕೂಡ ವದಂತಿಯಷ್ಟೆ’ ಎಂದರು.

‘ಪಕ್ಷದ ಅಭ್ಯರ್ಥಿಗಳಿಗೆ ಇಂದಿನಿಂದ ‘ಬಿ’ ಫಾರಂ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಜೆಡಿಎಸ್‌ನ ಮೂವರು ಶಾಸಕರಿದ್ದಾರೆ. ಹೆಬ್ಬಾಳದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಕಾರಣದಿಂದ ಅಲ್ಲಿ ಜಮೀರ್ ಅಹಮ್ಮದ್ ಅವರನ್ನು ಚುನಾವಣೆ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ’ ಎಂದು ತಿಳಿಸಿದರು.

‘ಬಂಡೆಪ್ಪ ಕಾಶೆಂಪೂರ ಅವರಿಗೆ ಬೀದರ್ ಕ್ಷೇತ್ರದ ಜವಾಬ್ದಾರಿ ವಹಿಸಲಾಗಿದೆ. ಎಲ್ಲಾ ಕಡೆ ನನಗೆ ಸುತ್ತಾಡಲು ಸಾಧ್ಯವಿಲ್ಲದ ಕಾರಣ ಪಕ್ಷದ ಮುಖಂಡರಿಗೆ ಜವಾಬ್ದಾರಿ ವಹಿಸಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.