ADVERTISEMENT

ಜಾನಪದ ವಿ.ವಿ ರೂಪುಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:40 IST
Last Updated 16 ಸೆಪ್ಟೆಂಬರ್ 2011, 19:40 IST

ಬೆಂಗಳೂರು: `ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಇರುವ ಹಲವು ಆಯಾಮಗಳ ಕೇಂದ್ರವಾಗಿ ಜಾನಪದ ವಿಶ್ವವಿದ್ಯಾಲಯ ರೂಪುಗೊಳ್ಳಬೇಕು~ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಅಕಾಡೆಮಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೂಲ ಹಾಗೂ ಜನಪದ ಗಾಯಕರ ರಾಜ್ಯಮಟ್ಟದ ಪ್ರಥಮ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

 `ದೇವರ ಆರಾಧನೆಗೆ ಬಳಕೆಯಾಗುತ್ತಿದ್ದ ಜಾನಪದ ಸಂಸ್ಕೃತಿಯು ಇಂದು ವ್ಯಕ್ತಿ ಆರಾಧನೆ ಮತ್ತು ಸ್ವಾಗತ ಕಾರ್ಯಕ್ರಮಗಳಿಗೆ ಸೀಮಿತಗೊಳ್ಳುತ್ತಿರುವುದು ಶೋಚನೀಯ~ ಎಂದರು.

`ಶೋಷಿತ ಮತ್ತು ಕೆಳ ವರ್ಗದ ಜನರಿಂದ ರಚನೆಗೊಂಡಿರುವ ಜನಪದ ಕಲೆ, ಸಾಹಿತ್ಯ, ಗಾಯನವನ್ನು ಉಳಿಸುವುದು ಸರ್ಕಾರ ಮತ್ತು ಸಮಾಜ ಕರ್ತವ್ಯ. ಈ ದಿಸೆಯಲ್ಲಿ ಇಂತಹ ಸಮಾವೇಶಗಳು ಅಗತ್ಯವಿದೆ~ ಎಂದು ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ` ಮೂಲ ಗಾಯಕರು ಮತ್ತು ಆಧುನಿಕ ಗಾಯಕರು ಪರಸ್ಪರ ಚರ್ಚೆಯಲ್ಲಿ ತೊಡಗಿಕೊಳ್ಳುವ ಮೂಲಕ ಜನಪದ ಗಾಯನ ಸಂಸ್ಕೃತಿಯನ್ನು ಜೀವಂತವಾಗಿಡಲು ಸಾಧ್ಯವಿದೆ~ ಎಂದು ಅಭಿಪ್ರಾಯಪಟ್ಟರು.

`ಜಾನಪದ ಕಲೆ ಮತ್ತು ಗಾಯನದ ಸಂಬಂಧ ವಿಶೇಷ ವಿಭಾಗವನ್ನು ಜಾನಪದ ವಿಶ್ವವಿದ್ಯಾಲಯದಲ್ಲಿ ತೆರೆಯಬೇಕು. ಜಾನಪದ ಕುಣಿತ ಮತ್ತು ಗಾಯನದ ಬಗ್ಗೆ ತಿಳಿಸಿಕೊಡಲು ಸೂಕ್ತ ಅಧ್ಯಾಪಕರನ್ನು ನೇಮಿಸಬೇಕು. ಶಾಸ್ತ್ರೀಯವಾಗಿ ಸಂಗೀತ ಕಲಿಯದೇ ಇರುವ ಅದೆಷ್ಟು ಗ್ರಾಮೀಣ ಪ್ರತಿಭೆಗಳಿಗೂ ಸೂಕ್ತ ವೇದಿಕೆ ಕಲ್ಪಿಸುವ ದಿಸೆಯಲ್ಲಿ ಇಂತಹ ಸಮಾವೇಶಗಳು ಪ್ರಯೋಜನಕಾರಿ~ ಎಂದು ತಿಳಿಸಿದರು.

`ಜಾನಪದ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೂ ಪಸರಿಸುವಲ್ಲಿ ಜನಪದೀಯರು ಶ್ರಮಿಸಬೇಕು. ಯುವಜನಾಂಗ ಈ ಬಗ್ಗೆ ಹೆಚ್ಚು ಒಲವು ತೋರ್ಪಡಿಸಬೇಕಿದೆ~ ಎಂದು ಹೇಳಿದರು.

ಜಾನಪದ ಗಾಯಕರಾದ ಬಾನಂದೂರು ಕೆಂಪಯ್ಯ, ಡಾ.ವೇಮಗಲ್ ಡಿ.ನಾರಾಯಣಸ್ವಾಮಿ, ಅಪ್ಪಗೆರೆ ತಿಮ್ಮರಾಜು, ಕೆ.ಯುವರಾಜ್, ಜನ್ನಿ ಕಾರ್ಯಕ್ರಮ ನಡೆಸಿಕೊಟ್ಟರು. ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಡಾ.ವೀರೇಶ್ ಬಳ್ಳಾರಿ, ಅಕಾಡೆಮಿ ರಿಜಿಸ್ಟ್ರಾರ್ ಬಿ.ಎನ್.ಪರಡ್ಡಿ, ಸದಸ್ಯ ಸಂಚಾಲಕ ಎಂ.ಕೆ.ಸಿದ್ದರಾಜು ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.