ADVERTISEMENT

ಜಿ.ಟಿ. ದೇವೇಗೌಡಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:15 IST
Last Updated 5 ಅಕ್ಟೋಬರ್ 2012, 19:15 IST

ಬೆಂಗಳೂರು: ಮೈಸೂರು ಸಮೀಪದ ಕಲ್ಲೂರು ನಾಗನಹಳ್ಳಿ, ಯಲಚನಹಳ್ಳಿ, ಗುಂಗ್ರಾಳ್ ಛತ್ರ ಪ್ರದೇಶದಲ್ಲಿ ರಾಜ್ಯ ಗೃಹ ಮಂಡಳಿ (ಕೆಎಚ್‌ಬಿ) ವತಿಯಿಂದ ನಡೆದಿರುವ ಮನೆಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬ ದೂರಿನ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಕೆಎಚ್‌ಬಿ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಇತರರಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೆಎಚ್‌ಬಿ ಆಯುಕ್ತರು, ಕೆಎಚ್‌ಬಿಯ ಭೂಸ್ವಾಧೀನ ವಿಶೇಷ ಅಧಿಕಾರಿ ಅವರಿಗೂ ತುರ್ತು ನೋಟಿಸ್ ಜಾರಿ ಮಾಡುವಂತೆ ಪೀಠ ಆದೇಶಿಸಿದೆ.

ದೂರು ಹೀಗಿದೆ: ಮನೆಗಳ ನಿರ್ಮಾಣಕ್ಕೆ 250ರಿಂದ 300 ಎಕರೆ ಭೂಮಿಯನ್ನು 2008ರಲ್ಲಿ ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿ ಒಂದು ಎಕರೆ ಭೂಮಿಯ ಮಾರ್ಗಸೂಚಿ ಮೌಲ್ಯ 1ರಿಂದ 3 ಲಕ್ಷ ರೂಪಾಯಿ ಆಗಿತ್ತು. ಆದರೆ ಭೂಮಿಯ ಮೂಲ ಮಾಲೀಕರಿಗೆ ಪರಿಹಾರ ನಿಗದಿ ಮಾಡುವ ಸಂಬಂಧ ಮೈಸೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸೆಪ್ಟೆಂಬರ್ 2009ರಲ್ಲಿ ನಡೆದ ಸಭೆ, ಪ್ರತಿ ಎಕರೆ ಭೂಮಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡುವ ನಿರ್ಣಯ ತೆಗೆದುಕೊಂಡಿದೆ.

ಮಾರ್ಗಸೂಚಿ ಬೆಲೆ ಮತ್ತು ಪರಿಹಾರದ ಮೊತ್ತದಲ್ಲಿ ಭಾರಿ ಪ್ರಮಾಣದ ವ್ಯತ್ಯಾಸ ಇದೆ. ದೇವೇಗೌಡ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು, ಭೂಮಿಗೆ ಪರಿಹಾರವಾಗಿ ನೀಡುವ ಬೆಲೆಯಲ್ಲಿ ಹೆಚ್ಚಳ ಮಾಡಿಸಿದ್ದಾರೆ.

ದೇವೇಗೌಡ ಅವರ ಬೆಂಬಲಿಗರು ಕೆಎಚ್‌ಬಿ ಅಧಿಕಾರಿಗಳ ಜೊತೆ ಶಾಮೀಲಾಗಿ, ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ರೈತರ ಸೋಗಿನಲ್ಲಿ ಪಾಲ್ಗೊಂಡಿದ್ದಾರೆ. ಮೂಲ ಮಾಲೀಕರಿಗೆ ದೊರೆಯುವ ಪರಿಹಾರದಲ್ಲಿ 20ರಿಂದ 25 ಲಕ್ಷ ರೂಪಾಯಿ `ಕಿಕ್-ಬ್ಯಾಕ್~ ಪಡೆಯುವ ಉದ್ದೇಶ ಇವರದ್ದು ಎಂದು ಎಂ. ಗೋಪಿನಾಥ್ ಎಂಬುವವರು ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಸಭೆಯಲ್ಲಿ ರೈತರು ಪಾಲ್ಗೊಂಡೇ ಇಲ್ಲ, ಅವರಿಗೆ ಪರಿಹಾರವೂ ದೊರೆತಿಲ್ಲ. ಇಲ್ಲಿ ಅಂದಾಜು 100 ಕೋಟಿ ರೂಪಾಯಿ ಮೊತ್ತದ ಅವ್ಯವಹಾರ ನಡೆದಿದೆ. ಈ ಅವ್ಯವಹಾರ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಗುಟ್ಕಾ ನಿಷೇಧ: ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ ಸಂಬಂಧ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಶುಕ್ರವಾರ ಸೂಚಿಸಿತು. ಕ್ಯಾನ್ಸರ್ ರೋಗಿಗಳ ನೆರವು ಸಂಘ ಗುಟ್ಕಾ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿತು. ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಲಾಗಿದೆ.

ವೈದ್ಯನಾಥ ಆಯೋಗಕ್ಕೆ ನೋಟಿಸ್:
ಮಾರ್ಚ್ 2ರಂದು ಬೆಂಗಳೂರಿನ ಸಿವಿಲ್ ನ್ಯಾಯಾಲಯಗಳ ಆವರಣದಲ್ಲಿ ಕೆಲವು ಮಾಧ್ಯಮ ಪ್ರತಿನಿಧಿಗಳು, ಪೊಲೀಸರು ಮತ್ತು ವಕೀಲರ ನಡುವೆ ಸಂಭವಿಸಿದ ಅಹಿತಕರ ಘಟನೆ ಕುರಿತು ವಿಚಾರಣೆ ನಡೆಸಲು ರಚಿಸಲಾಗಿರುವ ನ್ಯಾಯಮೂರ್ತಿ ಆರ್.ಜಿ. ವೈದ್ಯನಾಥ ಆಯೋಗ ಮತ್ತು ಸರ್ಕಾರಕ್ಕೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶಿಸಿದೆ.

`ಮಾರ್ಚ್ 2ರ ಘಟನೆ ಕುರಿತು ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಗೆ ಆದೇಶ ಆಗಿದೆ. ಎಸ್‌ಐಟಿ ತನಿಖೆ ಇರುವಾಗ ಆಯೋಗದ ವಿಚಾರಣೆ ಏಕೆ? ಎಸ್‌ಐಟಿಗೆ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವ ಅಧಿಕಾರ ಇದೆ. ಆದರೆ ಆಯೋಗಕ್ಕೆ ಹೇಳಿಕೆ ದಾಖಲು ಮಾಡುವ ಅಧಿಕಾರ ಮಾತ್ರ ಇದೆ. ಒಂದೇ ಘಟನೆ ಕುರಿತು ಎರಡು ತನಿಖೆ ನಡೆಸುವುದರಿಂದ, ವಿಭಿನ್ನ ವರದಿ ಬರುವ ಸಾಧ್ಯತೆಯೂ ಇದೆ~ ಎಂದು ವಕೀಲರು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು, ಆಯೋಗ ಮತ್ತು ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶಿಸಿದರು.

ಫಲಿತಾಂಶ: ವರದಿ ನೀಡಲು ಆದೇಶ
ಬಳ್ಳಾರಿ ಮೀಸಲು ಲೋಕಸಭಾ ಸ್ಥಾನಕ್ಕೆ 2009ರಲ್ಲಿ ನಡೆದ ಚುನಾವಣೆಯ ಮರು ಎಣಿಕೆ ಫಲಿತಾಂಶದ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ನ್ಯಾಯಮೂರ್ತಿ ಎಚ್. ಬಿಳ್ಳಪ್ಪ ಅವರು ಬಳ್ಳಾರಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.