ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯನ ಕಗ್ಗೊಲೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2012, 19:30 IST
Last Updated 25 ಜುಲೈ 2012, 19:30 IST
ಜಿಲ್ಲಾ ಪಂಚಾಯ್ತಿ ಸದಸ್ಯನ ಕಗ್ಗೊಲೆ
ಜಿಲ್ಲಾ ಪಂಚಾಯ್ತಿ ಸದಸ್ಯನ ಕಗ್ಗೊಲೆ   

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ ವಿರೋಧ ಪಕ್ಷದ ನಾಯಕ ಹಾಗೂ ಜೆಡಿಎಸ್ ಸದಸ್ಯ ಬಿನ್ನಮಂಗಲ ಕೃಷ್ಣಪ್ಪ ಉರುಫ್ ಬಿಎಂಎಲ್ ಕೃಷ್ಣಪ್ಪ (58) ಅವರ ಮೇಲೆ ಕುಖ್ಯಾತ ರೌಡಿ ಬೆತ್ತನಗೆರೆ ಸೀನನ ಸಹಚರರು ಮನಬಂದಂತೆ ಗುಂಡಿನ ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನೆಲಮಂಗಲ ಬಳಿಯ ಅರಿಶಿನಕುಂಟೆ ಸಮೀಪ ಬುಧವಾರ ರಾತ್ರಿ ನಡೆದಿದೆ.

ಇದೇ ವೇಳೆ ಕೃಷ್ಣಪ್ಪ ಅವರ ಅಂಗರಕ್ಷಕರು ಆತ್ಮರಕ್ಷಣೆಗಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಬೆತ್ತನಗೆರೆ ಸೀನನ ಸಹಚರ ಮೃತಪಟ್ಟಿದ್ದಾನೆ. ಮೃತನ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ಕೃಷ್ಣಪ್ಪ ಅವರ ಕಾರು ಚಾಲಕ, ಅಂಗರಕ್ಷಕರು ಹಾಗೂ ಕೆಲ ಬೆಂಬಲಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಗರದಲ್ಲಿ ಮಧ್ಯಾಹ್ನ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಕೃಷ್ಣಪ್ಪ ಅವರು, ಶೇಷಾದ್ರಿಪುರ ಹೋಟೆಲ್‌ನಲ್ಲಿ ಬೆಂಬಲಿಗರೊಂದಿಗೆ ಕಾಫಿ ಕುಡಿದಿದ್ದಾರೆ. ಬಳಿಕ ಬೆಂಬಲಿಗರೊಂದಿಗೆ ಮೂರು ಕಾರುಗಳಲ್ಲಿ ಸ್ವಂತ ಊರಾದ ಬಿನ್ನಮಂಗಲಕ್ಕೆ ಹೋಗುತ್ತಿದ್ದಾಗ, ಸೀನನ 40ಕ್ಕೂ ಹೆಚ್ಚು ಸಹಚರರು ಟೆಂಪೊ, ಕ್ಯಾಂಟರ್ ಮತ್ತು ಕಾರುಗಳಲ್ಲಿ ಹಿಂಬಾಲಿಸಿ ಬಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಈ ಕೃತ್ಯ ಎಸಗಿದ್ದಾರೆ.

ಸೀನನ ಸಹಚರರು ಅರಿಶಿನಕುಂಟೆ ಬಳಿ ಕೃಷ್ಣಪ್ಪ ಅವರ ಕಾರಿಗೆ ಉದ್ದೇಶಪೂರ್ವಕವಾಗಿ ಕ್ಯಾಂಟರ್ ಗುದ್ದಿಸಿದ್ದಾರೆ. ನಂತರ ಏಕಾಏಕಿ ಅವರ ಕಾರಿನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಪಿಸ್ತೂಲ್‌ಗಳಿಂದ ಗುಂಡಿನ ಮಳೆಗರೆದಿದ್ದಾರೆ.

ಈ ವೇಳೆ ಕೃಷ್ಣಪ್ಪ ಅವರ ರಕ್ಷಣೆಗೆ ಧಾವಿಸಿದ ಅಂಗರಕ್ಷಕರು ಮತ್ತು ಬೆಂಬಲಿಗರು, ಎದುರಾಳಿಗಳ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ಪರಿಣಾಮ ಎರಡೂ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಹಂತದಲ್ಲಿ ಕೃಷ್ಣಪ್ಪ ಅವರು ವಾಹನದಿಂದ ಕೆಳಗಿಳಿದು ತಪ್ಪಿಸಿಕೊಳ್ಳಲು ಯತ್ನಿಸಿದರು.

ಆಗ ಸೀನನ ಸಹಚರರು ಮಚ್ಚು ಲಾಂಗ್‌ಗಳಿಂದ ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಕೃಷ್ಣಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ ಟಿ.ಬೇಗೂರು ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು ಕೆಲ ವರ್ಷಗಳ ಹಿಂದೆಯಷ್ಟೇ ಪಕ್ಷವನ್ನು ತೊರೆದು ಜೆಡಿಎಸ್ ಸೇರಿದ್ದರು.

ಕಲ್ಲು ತೂರಾಟ
ಘಟನೆಯಿಂದ ಉದ್ರಿಕ್ತರಾದ ಕೃಷ್ಣಪ್ಪ ಅವರ ಬೆಂಬಲಿಗರು ತುಮಕೂರು ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ಮಾಡಿದರು. ಅಲ್ಲದೇ ಕೆಎಸ್‌ಆರ್‌ಟಿಸಿ ಬಸ್‌ಗಳು, ಸಾರ್ವಜನಿಕರ ಕಾರುಗಳು ಸೇರಿದಂತೆ 60ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಜು ಒಡೆದು ಹಾಕಿದರು.

ಜತೆಗೆ ಬಸ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿ ತುಮಕೂರು ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಉದ್ರಿಕ್ತರು ಕಲ್ಲು ತೂರಾಟ ನಡೆಸಿದರು. ಪೊಲೀಸರು ಈ ಹಂತದಲ್ಲಿ ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದರು. ನಂತರ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿತು. `ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ವೇಳೆ ನಿಂತಿದ್ದ ವಾಹನಗಳ ಮೇಲೆ ದುಷ್ಕರ್ಮಿಗಳು ಮನ ಬಂದಂತೆ ದಾಳಿ ನಡೆಸಿದರು.
 
ಮಾರಕಾಸ್ತ್ರಗಳನ್ನು ಹಿಡಿದು ಕೂಗಾಡುತ್ತಾ ಬಂದ ದುಷ್ಕರ್ಮಿಗಳು ವಾಹನಗಳ ಗಾಜನ್ನು ಪುಡಿಗೊಳಿಸಿದರು. ದುಷ್ಕರ್ಮಿಗಳು ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪೊಲೀಸರಿದ್ದರು. ದುಷ್ಕರ್ಮಿಗಳ ಗುಂಪನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದರೂ, ದಾಳಿ ತಡೆಯಲು ಸಾಧ್ಯವಾಗಲಿಲ್ಲ~ ಎಂದು ಪ್ರತ್ಯಕ್ಷದರ್ಶಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಪೊಲೀಸ್ ವೈಫಲ್ಯವಿಲ್ಲ
`ದ್ವೇಷದ ಹಿನ್ನೆಲೆಯಲ್ಲಿ ಕೃಷ್ಣಪ್ಪ ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ರಾಮನಗರ,ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಸುತ್ತಮುತ್ತಲ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದ್ದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು~ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್ ತಿಳಿಸಿದರು.

`ಕೃಷ್ಣಪ್ಪ ಅವರ ಮೇಲೆ 2010ರಲ್ಲೂ ಗುಂಡಿನ ದಾಳಿ ನಡೆದಿತ್ತು. ಈ ಕಾರಣಕ್ಕಾಗಿ ಅವರ ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅವರು ಸಾರ್ವಜನಿಕ ಸಭೆ ಸಮಾರಂಭಗಳಿಗೆ ಹೋಗುತ್ತಿದ್ದ ಸಂದರ್ಭದಲ್ಲೆಲ್ಲಾ ಹೆಚ್ಚಿನ ಭದ್ರತೆ ನೀಡಲಾಗುತ್ತಿತ್ತು. ಇದರಿಂದಾಗಿ ಘಟನೆಯಲ್ಲಿ ಪೊಲೀಸ್ ವೈಫಲ್ಯದ ಪ್ರಶ್ನೆ ಉದ್ಭವಿಸುವುದಿಲ್ಲ~ ಎಂದರು.

ವರ್ಷದ ಹಿಂದಷ್ಟೇ ಬಿಡುಗಡೆ
`ಬೆತ್ತನಗೆರೆ ಸೀನ ಒಂದು ವರ್ಷದ ಹಿಂದೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆತನ ಎದುರಾಳಿ ಕುಖ್ಯಾತ ರೌಡಿ ಬೆತ್ತನಗೆರೆ ಶಂಕರನಿಗೆ ಕೃಷ್ಣಪ್ಪ ಅವರು ಹಣಕಾಸಿನ ನೆರವು ನೀಡುತ್ತಿದ್ದರು.

ಇದರಿಂದ ಕೋಪಗೊಂಡಿದ್ದ ಸೀನ, ಶಂಕರ ಮತ್ತು ಕೃಷ್ಣಪ್ಪ ಅವರನ್ನು ಕೊಲೆ ಮಾಡಲು ಹಲವು ಬಾರಿ ಪ್ರಯತ್ನ ನಡೆಸಿ ವಿಫಲನಾಗಿದ್ದ. ಸೀನನ ಸಹಚರರು ನೈಸ್ ರಸ್ತೆಯಲ್ಲಿ ಕೃಷ್ಣಪ್ಪ ಅವರನ್ನು 2011ರಲ್ಲಿ ಅಡ್ಡಗಟ್ಟಿ ಕೊಲೆ ಯತ್ನ ನಡೆಸಿದ್ದರು.

ಆದರೆ, ದಾಳಿ ವೇಳೆ ಕೃಷ್ಣಪ್ಪ ಪಾರಾಗಿದ್ದರು. ಬೆತ್ತನಗೆರೆ ಶಂಕರ ಬೆಳಗಾವಿ ಜೈಲಿನಲ್ಲಿದ್ದಾನೆ. ಸೀನ, ಹುಸ್ಕೂರು ಗ್ರಾಮ ಪಂಚಾಯ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದ~ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ಮುಸುಕುಧಾರಿಗಳು

`ಕಾರಿನಲ್ಲಿ ಬಿನ್ನಮಂಗಲಕ್ಕೆ ಹೋಗುತ್ತಿದ್ದಾಗ ಏಕಾಏಕಿ ಕ್ಯಾಂಟರ್ ನಮ್ಮ ಕಾರಿನ ಮುಂದೆ ಬಂದು ನಿಂತಿತು. ವಾಹನದಿಂದ ಕೆಳಗಿಳಿದ ದುಷ್ಕರ್ಮಿಗಳು ನಮ್ಮ ಮೇಲೆ ದಾಳಿ ಮಾಡಲು ಮುಂದಾದರು. ಕೆಲ ದುಷ್ಕರ್ಮಿಗಳು ಕೃಷ್ಣಪ್ಪ ಅವರನ್ನು ಕೆಳಗೆಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾದರು. ಮುಸುಕು ಧರಿಸಿದ್ದರಿಂದ ಅವರು ಯಾರು ಎಂಬುದು ಗೊತ್ತಾಗಲಿಲ್ಲ~ ಎಂದು ಹಿಂದಿನ ಕಾರಿನಲ್ಲಿದ್ದ ಕೃಷ್ಣಪ್ಪ ಅವರ ಬೆಂಬಲಿಗ ನರಸಿಂಹ ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.