ADVERTISEMENT

ಜೀವನ ಪದ್ಧತಿ ಬದಲಾದಂತೆ ಕಾಯಿಲೆ ಹೆಚ್ಚು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:50 IST
Last Updated 23 ಅಕ್ಟೋಬರ್ 2011, 19:50 IST

ಬೆಂಗಳೂರು: ಜನರ ಜೀವನ ಪದ್ಧತಿ ಬದಲಾದಂತೆಲ್ಲ ಮಧುಮೇಹ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೂರು ಕಾಯಿಲೆಗಳು ಮನುಷ್ಯನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯ ಡಾ.ಟಿ.ವಿ. ಶೇಷಗಿರಿ ಹೇಳಿದರು.

ಮಧುಮೇಹ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಕೈಗೊಂಡಿರುವ ಅವರು ತಮಿಳು ಚಿತ್ರ ನಟ ಡಾ. ವಿಕ್ರಂ ಅವರ ಜೊತೆ ಭಾನುವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

`ಹೃದ್ರೋಗ, ಮಧುಮೇಹ, ಬೊಜ್ಜು ಮುಂತಾದ ಕಾಯಿಲೆಗಳನ್ನು ಜೀವನ ಕ್ರಮದಲ್ಲಿ ಕೆಲವು ಬದಲಾವಣೆ ತಂದುಕೊಳ್ಳುವ ಮೂಲಕ ತಡೆಗಟ್ಟಬಹುದು. ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕ್ರಮವಾಗಿ ಶೇಕಡ 20 ಮತ್ತು 40ರಷ್ಟು ಜನರಿಗೆ ಅಧಿಕ ರಕ್ತದೊತ್ತಡ ಇದೆ~ ಎಂದು ಡಾ. ಶೇಷಗಿರಿ ಹೇಳಿದರು.

ಹಿಂದೆ ಕೇವಲ ನಗರವಾಸಿಗಳಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತಿದ್ದ ಮಧುಮೇಹ ಕಾಯಿಲೆ, ಇಂದು ಗ್ರಾಮವಾಸಿಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಗ್ರಾಮವಾಸಿಗಳ ಬದುಕಿನ ಶೈಲಿಯೂ ಬದಲಾಗಿರುವುದು ಇದಕ್ಕೆ ಕಾರಣ ಎಂದರು.

ಮದ್ಯಪಾನ ಮತ್ತು ಧೂಮಪಾನದಂತಹ ಚಟಗಳಿಂದ ದೂರವಿರುವುದು ಅವಶ್ಯ ಎಂದ ಅವರು, `ದುಶ್ಚಟಗಳನ್ನು ಬಿಡಲು ಒಮ್ಮಗೇ ಸಾಧ್ಯವಿಲ್ಲದಿದ್ದರೂ ಅವುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು~ ಎಂದರು.
ಕಾಶ್ಮೀರದಿಂದ ಬೆಂಗಳೂರಿನವರೆಗೆ ಸೈಕಲ್ ಯಾತ್ರೆಯ ಮೂಲಕ ಬರುವಾಗ ನೂರಾರು ಶಾಲೆ, ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಕರಪತ್ರಗಳನ್ನು ಹಂಚಲಾಗಿದೆ. ಪ್ರತಿದಿನ 8-10 ಗಂಟೆ ಸೈಕಲ್ ತುಳಿಯುತ್ತಿದ್ದೆ, ಈ ಅವಧಿಯಲ್ಲಿ ಸುಮಾರು 150 ಜನರನ್ನು ಭೇಟಿ ಮಾಡುತ್ತಿದ್ದೆ ಎಂದರು.

ಚಿತ್ರನಟ ವಿಕ್ರಂ ಮಾತನಾಡಿ, `ಡಾ. ಶೇಷಗಿರಿ ಅವರು ಮಾಡುತ್ತಿರುವ ಕಾರ್ಯದ ರಾಯಭಾರಿ ನಾನು, ಈ ಯೋಜನೆಯ ನಿಜವಾದ ಹೀರೊ ಅವರೇ~ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.