ADVERTISEMENT

ಜೆಡಿಎಸ್‌ಗೆ ಸಿದ್ಧಾಂತವೇ ಇಲ್ಲ: ಮೊಯಿಲಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 19:06 IST
Last Updated 23 ಏಪ್ರಿಲ್ 2018, 19:06 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ಬೆಂಗಳೂರು: ‘ಜಾತ್ಯತೀತ ಜನತಾದಳ (ಜೆಡಿಎಸ್‌) ಪಕ್ಷಕ್ಕೆ ಸಿದ್ಧಾಂತವೇ ಇಲ್ಲ’ ಎಂದು ಕೆ‍ಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯಿಲಿ ಲೇವಡಿ ಮಾಡಿದರು.

‘ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ನಾಯಕರೇ ಹೇಳಿದ್ದಾರೆ. ಬಿಜೆಪಿಯ ‘ಬಿ’ ಟೀಂ ಜೆಡಿಎಸ್ ಎಂದು ರಾಹುಲ್ ಗಾಂಧಿ ಹೇಳಿದ ಮಾತು ನಿಜವಾಗುತ್ತಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಹೇಳಿದರು.

‘ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌– ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿರುವುದು ಈಗಾಗಲೇ ಜನರ ಗಮನಕ್ಕೆ ಬಂದಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಕಂಡ ವ್ಯಕ್ತಿಯನ್ನು ಇಲ್ಲಿ ಬಿಜೆಪಿ ಕಣಕ್ಕಿಳಿಸಿದೆ. ಇದಕ್ಕಿಂತ ಬೇರೆ ಸಾಕ್ಷ್ಯ ಏನು ಬೇಕು’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ವಚನ ಭ್ರಷ್ಟ ಪ್ರಧಾನಿ ನರೇಂದ್ರ ಮೋದಿ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಚುನಾವಣೆಗೆ ಹೋಗುತ್ತಿದೆ. ಹಗಲು ದರೋಡೆ ಮಾಡಿದ, ಜೈಲಿನಲ್ಲಿದ್ದ ರೆಡ್ಡಿ ಮತ್ತು ಅವರ ಜೊತೆಯಲ್ಲಿದ್ದವರಿಗೆ ಬಿಜೆಪಿ ಟಿಕೆಟ್‌ ನೀಡಿದೆ’ ಎಂದು ಟೀಕಿಸಿದರು.

‘ಕರ್ನಾಟಕದಲ್ಲಿ ಬಸವ, ಕನಕ, ಪಂಪ, ಅಂಬೇಡ್ಕರ್ ಪ್ರಜ್ಞೆ ಇದೆ. ಮೋದಿ ಪ್ರಜ್ಞೆಗೆ ರಾಜ್ಯದಲ್ಲಿ ಅವಕಾಶ ಇಲ್ಲ. ರಾಜ್ಯ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯೂ ಇಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಚುನಾವಣೆ ಗೆಲ್ಲಲಿದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

27ರಂದು ಕಾಂಗ್ರೆಸ್‌ ಪ್ರಣಾಳಿಕೆ
ಮಂಗಳೂರಿನಲ್ಲಿ ಇದೇ 27ರಂದು ರಾಹುಲ್‌ ಗಾಂಧಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಮೊಯಿಲಿ ಹೇಳಿದರು.

ಅದೇ ದಿನ ಬೆಂಗಳೂರಲ್ಲಿ ಸ್ಯಾಮ್‌ ಪಿತ್ರೋಡ, ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಹುಬ್ಬಳ್ಳಿಯಲ್ಲಿ ಶಶಿ ತರೂರ್ ಪ್ರಣಾಳಿಕೆ ಅನಾವರಣಗೊಳಿಸುವರು. ರಾಜ್ಯ, ಪ್ರಾದೇಶಿಕ ಮತ್ತು ಸ್ಥಳೀಯ ಹೀಗೆ ಮೂರು ಹಂತಗಳಲ್ಲಿ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದೂ ಅವರು ತಿಳಿಸಿದರು.

**

ಕೇಂದ್ರದ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ತೋಳ್ಬಲದಿಂದ ಹಾಳು ಮಾಡುತ್ತಿದೆ. ಚುನಾವಣಾ ಆಯೋಗಕ್ಕೂ ಪಾರದರ್ಶಕವಾಗಿ ಕೆಲಸ ಮಾಡಲು ಬಿಡುತ್ತಿಲ್ಲ.
ವೀರಪ್ಪ ಮೊಯಿಲಿ, ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.