ADVERTISEMENT

ಜೆಡಿಎಸ್ ಆಸ್ತಿ ಮೌಲ್ಯ ವರ್ಷದಲ್ಲಿ 7 ಪಟ್ಟು ಹೆಚ್ಚಳ

‘ನ್ಯಾಷನಲ್‌ ಎಲೆಕ್ಷನ್‌ ವಾಚ್‌’, ಅಸೋಸಿ­ಯೇಷನ್‌ ಫಾರ್‌ ಡೆಮಾ­ಕ್ರಟಿಕ್‌ ರಿಫಾರ್ಮ್ಸ್ ನಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:48 IST
Last Updated 9 ಮಾರ್ಚ್ 2018, 19:48 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಬೆಂಗಳೂರು: ಜೆಡಿಎಸ್‌ ಪಕ್ಷದ ಘೋಷಿತ ಸ್ಥಿರಾಸ್ತಿಯ ಮೌಲ್ಯ 2011–2015ವರೆಗೆ ಇಳಿಮುಖವಾಗಿದ್ದು, 2015–16ರಲ್ಲಿ ಸುಮಾರು ಏಳು ಪಟ್ಟು ಹೆಚ್ಚಾಗಿದೆ.

ಚುನಾವಣಾ ವೇಳೆ ಪಕ್ಷಗಳು ನೀಡಿರುವ ಪ್ರಮಾಣ­ಪತ್ರದಲ್ಲಿನ ಮಾಹಿತಿ­ಗಳನ್ನು ಕಲೆ ಹಾಕಿ­ರುವ ‘ನ್ಯಾಷನಲ್‌ ಎಲೆಕ್ಷನ್‌ ವಾಚ್‌’ (ಎನ್‌ಇಡಬ್ಲು) ಮತ್ತು ಅಸೋಸಿ­ಯೇಷನ್‌ ಫಾರ್‌ ಡೆಮಾ­ಕ್ರಟಿಕ್‌ ರಿಫಾರ್ಮ್ಸ್ (ಎಡಿಆರ್‌) ಸಂಸ್ಥೆಗಳು ಈ ಸಂಗತಿ ಬಹಿರಂಗಗೊಳಿಸಿವೆ.

2011ರಲ್ಲಿ ₹17 ಲಕ್ಷದಷ್ಟಿದ್ದ ಪಕ್ಷದ ಸ್ಥಿರಾಸ್ತಿಯು, 2012ರಲ್ಲಿ ₹15 ಲಕ್ಷಕ್ಕೆ ಇಳಿದಿತ್ತು. 2013ರ ವಿಧಾನಸಭಾ ಚುನಾವಣೆ ವೇಳೆ ಇದು ₹16
ಲಕ್ಷಕ್ಕೆ ಏರಿಕೆಯಾಗಿತ್ತು. 2014ರಲ್ಲಿ ಮತ್ತೆ ₹11 ಲಕ್ಷಕ್ಕೆ ಇಳಿದಿತ್ತು. ಆದರೆ, 2015–16ರಲ್ಲಿ ಇದು ₹84 ಲಕ್ಷಕ್ಕೆ ಏರಿಕೆಯಾಗಿದೆ.

ADVERTISEMENT

20 ಪ್ರಾದೇಶಿಕ ಪಕ್ಷಗಳ ಸ್ಥಿರಾಸ್ತಿಯ ಮೌಲ್ಯ ಐದು ವರ್ಷಗಳಲ್ಲಿ ಶೇ 80.19ರಷ್ಟು ಹೆಚ್ಚಾಗಿದೆ. ಆಸ್ತಿ ಹೆಚ್ಚಳ ಪ್ರಮಾಣದಲ್ಲಿ ಸಮಾಜವಾದಿ ಪಕ್ಷ ಮೊದಲ ಸ್ಥಾನದಲ್ಲಿದೆ.

‘ಚುನಾವಣೆ ವೆಚ್ಚದ ಮಿತಿ ಅಭ್ಯರ್ಥಿಗಳಿಗೆ ಮಾತ್ರ ಸೀಮಿತ. ಇದು ಪಕ್ಷಗಳಿಗೆ ಅನ್ವಯ ಆಗುವುದಿಲ್ಲ. ಚುನಾವಣಾ ಅಕ್ರಮಕ್ಕೆ ಇದು ದಾರಿ ಮಾಡಿಕೊಡುತ್ತದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪಕ್ಷಗಳ ಆದಾಯದ ಬಗ್ಗೆ ತಲೆಕಡಿಸಿಕೊಳ್ಳುವುದೇ ಇಲ್ಲ. ಅವರಿಗೆ ಹಣ ಎಲ್ಲಿಂದ ಬರುತ್ತದೆ ಎನ್ನುವುದು ಈಗಲೂ ನಿಗೂಢ’ ಎಂದು ಎಡಿಆರ್ ಸಂಸ್ಥಾಪಕ ತ್ರಿಲೋಚನ್‌ ಶಾಸ್ತ್ರಿ ಹೇಳಿದರು.

ಐದು ವರ್ಷಗಳಲ್ಲಿ ನಡೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಒಟ್ಟು 1.33 ಕೋಟಿ ನೋಟಾ (ಮೇಲಿನ ಯಾರಿಗೂ ಮತವಿಲ್ಲ) ಚಲಾಯಿಸಲಾಗಿದೆ. ನೋಟಾ ಕುರಿತಂತೆ ಕೆಲವು ಮಾರ್ಪಾಡುಗಳ ಅಗತ್ಯವಿದೆ. ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ ಅಭ್ಯರ್ಥಿಗೆ ಬಿದ್ದ ಮತಕ್ಕಿಂತ ಹೆಚ್ಚು ನೋಟಾ ಚಲಾವಣೆಯಾಗಿದ್ದರೆ ಮರು ಮತದಾನ ನಡೆಸಬೇಕು. ಅದರಲ್ಲಿ ಹಿಂದೆ ಸ್ಪರ್ಧಿಸಿದ ಯಾವುದೇ ಅಭ್ಯರ್ಥಿಗಳಿಗೆ ಅವಕಾಶ ನೀಡಬಾರದು ಎಂದರು.

ಮೊಬೈಲ್‌ ಆ್ಯಪ್, ಎಸ್‌ಎಂಎಸ್‌ ಸೇವೆ
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಉತ್ತೇಜಿಸಲು ಹಾಗೂ ಸಮರ್ಥ ಅಭ್ಯರ್ಥಿಯ ಆಯ್ಕೆಗೆ ನೆರವಾಗಲು ಎಡಿಆರ್ ಮೊಬೈಲ್‌ ಆ್ಯಪ್‌ ಹಾಗೂ ಎಸ್‌ಎಂಎಸ್‌ ಸೇವೆಯನ್ನು ಪ್ರಾರಂಭಿಸಿದೆ.

ಆ್ಯಪ್‌ ಬಳಸಿಕೊಂಡು ಚುನಾವಣಾ ಅಕ್ರಮಗಳ ಚಿತ್ರ ಹಾಗೂ ವಿಡಿಯೊ ಚಿತ್ರಿಕರಣ ಮಾಡಬಹುದು. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಮೂಲಕ ಅಕ್ರಮ ತಡೆಗೆ ಕ್ರಮಕೈಗೊಳ್ಳಬಹುದು.

ಮೊಬೈಲ್‌ನಲ್ಲಿ MY NETA ಎಂದು ಟೈಪ್‌ ಮಾಡಿ ವಾಸವಿರುವ ಪ್ರದೇಶದ ಪಿನ್‌ಕೋಡ್‌ ನಮೂದಿಸಿ 56070 ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಆ ಕ್ಷೇತ್ರದ ಅಭ್ಯರ್ಥಿಯ ಆಸ್ತಿ ವಿವರ, ಪಕ್ಷ, ಶೈಕ್ಷಣಿಕ ಅರ್ಹತೆಯ ಮಾಹಿತಿ ಪಡೆಯಬಹುದು.

*
ಜೆಡಿಎಸ್‌ ಅಭ್ಯರ್ಥಿ ಫಾರೂಕ್‌ ನಾಮಪತ್ರ
ಬೆಂಗಳೂರು:
ರಾಜ್ಯಸಭೆಗೆ ಇದೇ 23ರಂದು ನಡೆಯಲಿರುವ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಬಿ.ಎಂ. ಫಾರೂಕ್‌ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಸೂಚಕರಾಗಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಶಾಸಕರಾದ ಎಚ್‌.ಡಿ. ರೇವಣ್ಣ, ಸಿ.ಎನ್‌. ಬಾಲಕೃಷ್ಣ, ಎಂ.ಟಿ. ಕೃಷ್ಣಪ್ಪ, ಮಂಜುನಾಥ ಗೌಡ, ಕೆ. ಗೋಪಾಲಯ್ಯ ಸೇರಿ 10 ಜನ ಸಹಿ ಹಾಕಿದರು.

ಅಭ್ಯರ್ಥಿಗಳ ಹೆಸರು ಪ್ರಕಟ: ಶಿಕ್ಷ‌ಕರ ಹಾಗೂ ಪದವೀಧರ ಕ್ಷೇತ್ರಗಳಿಂದ ‌ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಪ್ರಕಟಿಸಿದ್ದಾರೆ.

ಶಿಕ್ಷಕರ ಕ್ಷೇತ್ರಗಳಿಂದ ಮರಿತಿಬ್ಬೇಗೌಡ (ದಕ್ಷಿಣ), ರಮೇಶ್‌ಬಾಬು (ಆಗ್ನೇಯ), ಎಸ್‌.ಎಲ್‌. ಭೋಜೇಗೌಡ (ನೈರುತ್ಯ), ಪದವೀಧರ ಕ್ಷೇತ್ರಗಳಿಂದ ಎಲ್‌.ಆರ್. ಶಿವರಾಮೇಗೌಡ (ಬೆಂಗಳೂರು), ಎನ್‌. ಪ್ರತಾಪ್‌ ರೆಡ್ಡಿ (ಈಶಾನ್ಯ), ಅಶ್ವಿನ್‌ ಪೆರಾರ (ನೈರುತ್ಯ) ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.