ADVERTISEMENT

ಜೋರ್ಡಾನ್ ವೈದ್ಯನಿಂದ ವಂಚನೆ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:28 IST
Last Updated 22 ಮಾರ್ಚ್ 2018, 20:28 IST

ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ ಮೂಲಕ 36 ವರ್ಷದ ಮಹಿಳೆಗೆ ಆಪ್ತನಾದ ವ್ಯಕ್ತಿಯೊಬ್ಬ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಸುಳ್ಳು ಹೇಳಿ ಅವರಿಂದ ₹ 48.86 ಲಕ್ಷವನ್ನು ತನ್ನ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾನೆ.

ಮೋಸ ಹೋದ ಮಹಿಳೆ ಮಾರ್ಚ್ 19ರಂದು ಸಿಐಡಿ ಕಚೇರಿಗೆ ತೆರಳಿ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳ ವಿವರ ಆಧರಿಸಿ ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.

ಜೋರ್ಡಾನ್ ಡಾಕ್ಟರ್: ಸರ್ಕಾರಿ ಉದ್ಯೋಗದಲ್ಲಿರುವ ಆ ಮಹಿಳೆ, ನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಮದುವೆಯಾಗಲು ನಿರ್ಧರಿಸಿದ್ದ ಅವರು, ‘ಭಾರತ್ ಮ್ಯಾಟ್ರಿಮೋನಿ’ ವೆಬ್‌ಸೈಟ್‌ನಲ್ಲಿ ಪ್ರೊಫೈಲ್ ತೆರೆದು ಸೂಕ್ತ ವರನ ಹುಡುಕಾಟದಲ್ಲಿದ್ದರು. ಈ ವೇಳೆ ಅವರಿಗೆ ಡಾ.ರಾಜೇಶ್ ಹೆಸರಿನ ಪ್ರೊಫೈಲ್ ಕಣ್ಣಿಗೆ ಬಿದ್ದಿತ್ತು. 2017ರ ಸೆ.23ರಂದು ಅವರು ರಿಕ್ವೆಸ್ಟ್ ಕಳುಹಿಸಿದ್ದರು. ಕೂಡಲೇ ಆ ಕೋರಿಕೆಯನ್ನು ಒಪ್ಪಿಕೊಂಡ ವಂಚಕ, ತನ್ನ ಮೊಬೈಲ್ ಸಂಖ್ಯೆ ಹಾಗೂ ಇ–ಮೇಲ್ ವಿಳಾಸವನ್ನೂ ನೀಡಿದ್ದ.

ADVERTISEMENT

ಮರುದಿನ ಮಹಿಳೆ ಕರೆ ಮಾಡಿದಾಗ, ‘ನಾನು 10 ವರ್ಷಗಳಿಂದ ಜೋರ್ಡಾನ್‌ನಲ್ಲಿ ವೈದ್ಯನಾಗಿದ್ದೇನೆ. ನನಗೆ ಹೊಂದಿಕೊಂಡು ಹೋಗುವಂತಹ ವಧು ಸಿಗಲಿಲ್ಲ ಎಂಬ ಕಾರಣದಿಂದ ಇನ್ನೂ ಮದುವೆ ಆಗಿಲ್ಲ. ನಿಮ್ಮ ಪ್ರೊಫೈಲ್ ನನಗೆ ಇಷ್ಟವಾಯಿತು’ ಎಂದು ಹೇಳಿದ್ದ. ಆ ನಂತರ ಇಬ್ಬರೂ ನಿರಂತರವಾಗಿ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು.

ನಯವಾದ ಮಾತುಗಳನ್ನಾಡಿ ಮಹಿಳೆಯ ವಿಶ್ವಾಸ ಗಿಟ್ಟಿಸಿಕೊಂಡ ಆರೋಪಿ, ಅವರಿಂದ ಹಣ ದೋಚಲು ಸಂಚು ರೂಪಿಸಿಕೊಂಡ. ಫೆಬ್ರುವರಿ ಕೊನೆ ವಾರದಲ್ಲಿ ತನ್ನ ‘rajeshamish76538912@gmail.com ’ ವಿಳಾಸದಿಂದ ಮೇಲ್ ಕಳುಹಿಸಿದ್ದ ಆತ, ‘ನಾನು ತುಂಬ ಸಂಕಷ್ಟದಲ್ಲಿದ್ದು, ತುರ್ತಾಗಿ ಹಣ ಬೇಕಿದೆ. ನೀವು ಸಾಲದ ರೂಪದಲ್ಲಿ ಹಣ ಕೊಟ್ಟರೆ, ನಾನು ಮದುವೆಯಾದ ಬಳಿಕ ಮರಳಿಸುತ್ತೇನೆ’ ಎಂದಿದ್ದ.

ಆತನ ಸಂಚನ್ನು ಅರಿಯದ  ಮಹಿಳೆ, ಆರೋಪಿ ನೀಡಿದ್ದ ನಾಲ್ಕು ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ₹ 48.86 ಲಕ್ಷ ಹಾಕಿದ್ದರು. ಹಣ ಜಮೆ ಆಗುತ್ತಿದ್ದಂತೆಯೇ ಆರೋಪಿಯ ಮೊಬೈಲ್ ಸ್ವಿಚ್ಡ್‌ಆಫ್ ಆಗಿದೆ. ಅಲ್ಲದೆ, ಮೇಲ್ ವಿಳಾಸವನ್ನೂ ಬ್ಲಾಕ್ ಮಾಡಿದ್ದಾನೆ. ಏನಾದರೂ ಪ್ರತಿಕ್ರಿಯೆ ಬರಬಹುದೆಂದು 15 ದಿನ ಕಾದಿರುವ ಮಹಿಳೆ, ಕೊನೆಗೆ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

ಟಾರ್ ಬ್ರೌಸರ್‌ ಬಳಕೆ

‘ಯುವತಿ ಹಣ ಜಮೆ ಮಾಡಿದ್ದ ಖಾತೆಗಳ ಪೂರ್ಣ ವಿವರ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಇವರು ಜಮೆ ಮಾಡಿದ್ದ ಹಣ ಜಾರ್ಖಂಡ್, ಗುಜರಾತ್ ಹಾಗೂ ಮುಂಬೈನ ಎಟಿಎಂಗಳಲ್ಲಿ ಡ್ರಾ ಆಗಿರುವುದು ಗೊತ್ತಾಗಿದೆ. ಆರೋಪಿ ಲ್ಯಾಪ್‌ಟಾಪ್‌ನಲ್ಲಿ ‘ಟಾರ್ ಬ್ರೌಸರ್’ ಡೌನ್‌ಲೋಡ್ ಮಾಡಿಕೊಂಡು, ಮಹಿಳೆ ಜತೆ ವ್ಯವಹರಿಸಿದ್ದಾನೆ. ಇದನ್ನು ಬಳಸಿದರೆ, ಐಪಿ ವಿಳಾಸವೂ ಸಿಗುವುದಿಲ್ಲ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.