ADVERTISEMENT

ಜ್ಞಾನಭಾರತಿ ರಸ್ತೆ ನವೀಕರಣ ಆರಂಭ

ದಯಾನಂದ ಎಚ್‌.ಎಚ್‌.
Published 2 ಮೇ 2012, 19:30 IST
Last Updated 2 ಮೇ 2012, 19:30 IST
ಜ್ಞಾನಭಾರತಿ ರಸ್ತೆ ನವೀಕರಣ ಆರಂಭ
ಜ್ಞಾನಭಾರತಿ ರಸ್ತೆ ನವೀಕರಣ ಆರಂಭ   

ಬೆಂಗಳೂರು: ಬಹಳ ದಿನಗಳಿಂದ ಹಳ್ಳ - ಗುಂಡಿ ಬಿದ್ದು ಹಾಳಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಎಂಟು ಕಿಲೋಮೀಟರ್ ರಸ್ತೆಯ ನವೀಕರಣ ಕಾಮಗಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಚಾಲನೆ ದೊರೆತಿದೆ.

`ಆರು ತಿಂಗಳ ಹಿಂದೆಯೇ ಬಿಬಿಎಂಪಿಯಿಂದ ಅನುಮೋದನೆ ಸಿಕ್ಕಿದ್ರೂ ಸರ್ಕಾರದ ಒಪ್ಪಿಗೆಗಾಗಿ ಕಾಯ್ತಿದ್ವಿ. ಕೆಲ ದಿನಗಳ ಹಿಂದೆ ಅಷ್ಟೇ ಸರ್ಕಾರದ ಒಪ್ಪಿಗೆ ದೊರೆತಿದೆ. ಈಗ ಕಾಮಗಾರಿ ಆರಂಭಿಸಲಾಗಿದೆ. 12.7 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಆರಂಭವಾಗಿರೋ ರಸ್ತೆ ನವೀಕರಣ ಕಾಮಗಾರಿಯನ್ನ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ.

18 ತಿಂಗಳ ಕಾಲಾವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸೋ ಹಾಗೆ ಯೋಜನೆ ರೂಪಿಸಲಾಗಿದೆ. ಆದ್ರೂ ಕಾಮಗಾರಿ ಚುರುಕಾಗಿ ನಡೀತಿದ್ದು, ಒಂದು ವರ್ಷದೊಳಗೇ ರಸ್ತೆ ಕಾಮಗಾರಿ ಪೂರ್ಣಗೊಳ್ಳೋ ವಿಶ್ವಾಸವಿದೆ~ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

`ಸರ್ಕಾರದ ಮಟ್ಟದಲ್ಲಿ ತಾಂತ್ರಿಕ ತೊಡಕುಗಳಿದ್ದ ಕಾರಣ ಬಿಬಿಎಂಪಿ ಅನುಮೋದನೆ ದೊರಕಿದ್ದರೂ ಕಾಮಗಾರಿ ಆರಂಭಕ್ಕೆ ಸರ್ಕಾರದ ಒಪ್ಪಿಗೆ ದೊರಕಿರಲಿಲ್ಲ. ಹೀಗಾಗಿ ರಸ್ತೆ ಕಾಮಗಾರಿ ಆರಂಭಿಸೋಕೆ ಸಾಧ್ಯವಾಗಿರಲಿಲ್ಲ. ಈಗ ಎಲ್ಲ ತೊಡಕುಗಳೂ ನಿವಾರಣೆಯಾಗಿ ಸರ್ಕಾರದ ಒಪ್ಪಿಗೆ ದೊರೆತಿರೋದ್ರಿಂದ ಆದಷ್ಟು ಬೇಗ ಕಾಮಗಾರಿ ಮುಗೀಬಹುದು~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಬಂಧವಿಲ್ಲ: `ವಿಶ್ವವಿದ್ಯಾಲಯ ವ್ಯಾಪ್ತಿ ರಸ್ತೆಗಳ ನವೀಕರಣ ಆರಂಭವಾಗಿದ್ದು, ಇದ್ರಿಂದ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಅನುಕೂಲವಾಗುತ್ತೆ. ಈ ಕಾಮಗಾರಿಯನ್ನ ಬಿಬಿಎಂಪಿಗೆ ವಹಿಸಲಾಗಿರೋದ್ರಿಂದ ಇದು ಈಗ ಸಾರ್ವಜನಿಕ ರಸ್ತೆಯಾಗೇ ಮಾರ್ಪಡುತ್ತೆ. ವಿಶ್ವವಿದ್ಯಾಲಯದ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ~ ಎಂದು ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ತಿಳಿಸಿದರು.

`ಕಾಮಗಾರಿಗಾಗಿ ಬಿಬಿಎಂಪಿ 11.7 ಕೋಟಿ ರೂಪಾಯಿಗಳನ್ನ ಮೀಸಲಿಟ್ಟಿದ್ದು, ವಿಶ್ವವಿದ್ಯಾಲಯದಿಂದ ಒಂದು ಕೋಟಿ ರೂಪಾಯಿಗಳನ್ನ ನೀಡಲಾಗಿದೆ. ಕಾಮಗಾರಿಗೆ ಹೆಚ್ಚಿನ ವೆಚ್ಚವನ್ನು ಬಿಬಿಎಂಪಿಯೇ ಭರಿಸಿರೋದ್ರಿಂದ ರಸ್ತೆ ಸಾರ್ವಜನಿಕರಿಗೂ ಮುಕ್ತವಾಗಲಿದೆ. ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರೋ ಯಾವುದೇ ಚಿಂತನೆ ವಿಶ್ವವಿದ್ಯಾಲಯದ ಮುಂದೆ ಇಲ್ಲ~ ಎಂದು ಅವರು ಸ್ಪಷ್ಟ ಪಡಿಸಿದರು.

`ವಿಶ್ವವಿದ್ಯಾಲಯ ವ್ಯಾಪ್ತಿಯ ರಸ್ತೆಯ ನವೀಕರಣವನ್ನು ಬಿಬಿಎಂಪಿಗೆ ವಹಿಸೋದ್ರಿಂದ ವಿಶ್ವವಿದ್ಯಾಲಯದ ರಸ್ತೆ ಸಾರ್ವಜನಿಕ ರಸ್ತೆಯಾಗಿ ಮಾರ್ಪಡುತ್ತೆ. ಯಾವುದೇ ಕಾರಣಕ್ಕೂ ವಿಶ್ವವಿದ್ಯಾಲಯದ ರಸ್ತೆಯನ್ನ ಸಾರ್ವಜನಿಕರ ಉಪಯೋಗಕ್ಕೆ ಬಿಡೋದಿಲ್ಲ~ ಎಂದು ಕುಲಪತಿ ಪ್ರೊ.ಎನ್.ಪ್ರಭುದೇವ್ ಕೆಲ ದಿನಗಳ ಹಿಂದೆ ಆಕ್ಷೇಪ ವ್ಯಕ್ತ ಪಡಿಸಿದ್ದರು.

`ಬಿಬಿಎಂಪಿ ರಸ್ತೆ ನವೀಕರಣ ಕಾಮಗಾರಿಯನ್ನ್ನ ಆರಂಭಿಸಿದ್ರೆ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ರಸ್ತೆ ಬಳಕೆಯಾಗ್ಬೇಕು. ಸಾರ್ವಜನಿಕ ವಾಹನಗಳು ಮತ್ತು ಬಸ್‌ಗಳ ಓಡಾಟಕ್ಕೆ ನಿರ್ಬಂಧ ವಿಧಿಸ್ತೇವೆ~ ಎಂದು ಅವರು ಹೇಳಿದ್ದರು. ವಿಶ್ವವಿದ್ಯಾಲಯದಲ್ಲಿ ರಸ್ತೆ ಕಾಮಗಾರಿ ಆರಂಭವಾದ ನಂತರ ಅವರು ಈ ಬಗ್ಗೆ ಪ್ರತಿಕ್ರಿಯೆಗೆ ಸಿಕ್ಕಿಲ್ಲ.

ವಿದ್ಯಾರ್ಥಿಗಳ ಹರ್ಷ: ಇಷ್ಟು ದಿನಗಳ ಕಾಲ ಹಾಳಾಗಿದ್ದ ರಸ್ತೆಯಲ್ಲಿಯೇ ಓಡಾಡಿ ಬೇಸತ್ತಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಸ್ತೆ ನವೀಕರಣ ಕಾಮಗಾರಿಯಿಂದ ಹರ್ಷಗೊಂಡಿದ್ದಾರೆ.

`ತುಂಬಾ ದಿನಗಳಿಂದ ಹಾಳಾದ ರಸ್ತೆಯಲ್ಲಿ ಓಡಾಡಿ ಸಾಕಾಗಿತ್ತು. ಈಗ ಮುಖ್ಯರಸ್ತೆಯ ಸ್ವಲ್ಪ ಭಾಗಕ್ಕೆ ಮಾತ್ರ ಟಾರ್ ಹಾಕಿರೋದ್ರಿಂದಲೇ ಓಡಾಡೋಕೆ ತುಂಬಾ ಅನುಕೂಲ ಆಗಿದೆ. ಕಾಮಗಾರಿ ಪೂರ್ತಿ ಮುಗಿದ ಮೇಲೆ ವಿಶ್ವವಿದ್ಯಾಲಯಕ್ಕೆ ಅಂಟಿದ್ದ ಒಂದು ಶಾಪವೇ ವಿಮೋಚನೆ ಆದ ಹಾಗೆ ಆಗುತ್ತೆ~ ಎಂದು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿ ನಂದನ್ ಹೇಳಿದರು.

`ಬರೇ ಹಳ್ಳಗಳೇ ತುಂಬಿದ್ದ ಈ ರಸ್ತೇಲಿ ಬೈಕ್ ಓಡಿಸೋದೇ ಕಷ್ಟವಾಗ್ತಿತ್ತು. ಈಗ ಮುಖ್ಯರಸ್ತೆಯ ಕಾಮಗಾರಿ ಒಂದಷ್ಟು ಮುಗಿದಿರೋದ್ರಿಂದ ಸ್ವಲ್ಪ ನೆಮ್ಮದಿಯಾಗಿ ಬೈಕ್ ಓಡಿಸಬಹುದು. ಆಳುದ್ದದ ಗುಂಡಿಗಳಿಂದಾಗಿ ಬೈಕ್‌ನಿಂದ ಬಿದ್ದು ಎಲ್ಲಿ ಸಾಯ್ತೀವೋ ಅನ್ನೋ ಭಯದಿಂದಲೇ ಬೈಕ್ ಓಡಿಸ್ತಿದ್ದೊ. ಇನ್ನು ಮುಂದಾದ್ರೂ ಆ ಭಯ ತಪ್ಪಬೋದು~ ಎಂದವರು ಇತಿಹಾಸ ವಿಭಾಗದ ವಿದ್ಯಾರ್ಥಿ ವೆಂಕಟೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.