ADVERTISEMENT

ಟಾಟಾ ಕಂಪೆನಿಯಿಂದ ಬಾರದ ಹೊಸ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಬೆಂಗಳೂರು:  ಹಳೆಯ ಬಸ್‌ಗಳ ಬದಲಿಗೆ ಹೊಸ ಬಸ್‌ಗಳನ್ನು ಸೇವೆಗೆ ಬಳಸಿಕೊಳ್ಳಲು ಬಿಎಂಟಿಸಿಯು ಮುಂದಾಗಿದ್ದರೂ ಬೇಡಿಕೆಗೆ ಅನುಗುಣವಾಗಿ ಟಾಟಾ ಕಂಪೆನಿಯು ಹೊಸ ಬಸ್‌ಗಳನ್ನು ಪೂರೈಸದಿರುವುದು ಹಳೆಯ ಬಸ್‌ಗಳ ಬದಲಾವಣೆಯ ಕಾರ್ಯಕ್ಕೆ ಹಿನ್ನಡೆಯಾದಂತಾಗಿದೆ.

ಪ್ರಸ್ತುತ ಸಂಸ್ಥೆಗೆ ಅಗತ್ಯವಿರುವ 700 ಟಾಟಾ `ಬಿಎಸ್-4~ ಬಸ್‌ಗಳು ಇದೇ 31 ರೊಳಗೆ ಸಂಸ್ಥೆಗೆ ಸೇರ್ಪಡೆಗೊಳ್ಳಬೇಕಿದ್ದರೂ ಇದುವರೆಗೆ ಕೇವಲ 263 ಬಸ್‌ಗಳು ಮಾತ್ರ ಸಂಸ್ಥೆಗೆ ಪೂರೈಕೆಯಾಗಿವೆ.

`ಸಂಸ್ಥೆಗೆ ಅಗತ್ಯವಿರುವ ಬಸ್‌ಗಳ ಪೂರೈಕೆಗೆ ಟಾಟಾ ಕಂಪೆನಿಯು ವಿಳಂಬ ಮಾಡುತ್ತಿದ್ದು, ಹೊಸ ತಂತ್ರಜ್ಞಾನದ `ಬಿಎಸ್-4~ ಬಸ್‌ಗಳ ಬೇಡಿಕೆಗೆ ತಕ್ಕಂತೆ ತಯಾರಿಕೆ ನಡೆಯದಿರುವುದೇ ವಿಳಂಬಕ್ಕೆ ಕಾರಣ~ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.

`ಸಂಸ್ಥೆಯು ಒಂದು ಬಾರಿಗೆ ಐದರಿಂದ ಹತ್ತು ಬಸ್‌ಗಳನ್ನು ಪಡೆದುಕೊಳ್ಳುತ್ತಿದ್ದು, ನೂತನ ತಂತ್ರಜ್ಞಾನದ ಬಸ್‌ಗಳ ಬೇಡಿಕೆಗೆ ತಕ್ಕಂತೆ ತಯಾರಿಕೆ ನಡೆಯದಿರುವುದೇ ಬಸ್‌ಗಳ ಪೂರೈಕೆಯು ತಡವಾಗುತ್ತಿರುವುದಕ್ಕೆ ಕಾರಣ~ ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭುದಾಸ್ ಹೇಳಿದ್ದಾರೆ.

`ಬಿಎಂಟಿಸಿಯಲ್ಲಿ ಒಂದು ಸಾವಿರ ಬಸ್‌ಗಳ ಬದಲಾವಣೆಯು ಶೀಘ್ರದಲ್ಲಿ ಆಗಬೇಕಿದೆ. ಸಾಮಾನ್ಯವಾಗಿ 7.5 ಲಕ್ಷ ಕಿಲೋ ಮೀಟರ್ ಓಡಿರುವ ಬಸ್‌ಗಳನ್ನು ಬದಲಾವಣೆ ಮಾಡಬೇಕು. ಆದರೆ, 10 ಲಕ್ಷ ಕಿಲೋ ಮೀಟರ್‌ಗಿಂತಲೂ ಹೆಚ್ಚು ಓಡಿರುವ ಬಸ್‌ಗಳೂ ಸಂಸ್ಥೆಯಲ್ಲಿ ಸಾಕಷ್ಟಿವೆ~ ಎಂದು ಅವರು ತಿಳಿಸಿದ್ದಾರೆ.

ಬಿಎಂಟಿಸಿಯು 700 `ಬಿಎಸ್-4~ ಬಸ್‌ಗಳ ಜೊತೆಗೆ 100 ವೋಲ್ವೊ ಬಸ್‌ಗಳೂ ಸೇರಿದಂತೆ ಒಟ್ಟೂ 825 ಬಸ್‌ಗಳನ್ನು ಹೊಂದುವ ಉದ್ದೇಶ ಹೊಂದಿದೆ. ಆದರೆ, 100 ವೋಲ್ವೊ ಬಸ್‌ಗಳ ಪೈಕಿ 32 ಬಸ್‌ಗಳು ಮಾತ್ರ ಸದ್ಯ ಸಂಸ್ಥೆಗೆ ಪೂರೈಕೆಯಾಗಿವೆ.

`ಪ್ರತಿ ವರ್ಷವೂ ಶೇ. 10 ರಷ್ಟು ಹಳೆಯ ಬಸ್‌ಗಳನ್ನು ಬದಲಾಯಿಸಬೇಕಿದೆ. ಆರು ಸಾವಿರ ಬಸ್‌ಗಳಲ್ಲಿ ಪ್ರತಿ ವರ್ಷವೂ ಕನಿಷ್ಠ 600 ಹೊಸ ಬಸ್‌ಗಳನ್ನು ಹಳೆಯ ಬಸ್‌ಗಳ ಬದಲಿಗೆ ಸೇರಿಸಿಕೊಳ್ಳಬೇಕಿದೆ. ಆದರೆ, ಪೂರೈಕೆಯಲ್ಲಾಗುತ್ತಿರುವ ವಿಳಂಬದಿಂದ ಇದು ಸಾಧ್ಯವಾಗುತ್ತಿಲ್ಲ. ಆದರೂ, ಸಂಸ್ಥೆಗೆ ಅಗತ್ಯವಿರುವ ಹೊಸ ಬಸ್‌ಗಳು ಶೀಘ್ರದಲ್ಲಿಯೇ ಪೂರೈಕೆಯಾಗಲಿವೆ~ ಎಂದು ಶ್ರೀನಿವಾಸ್ ಭರವಸೆ ವ್ಯಕ್ತಪಡಿಸಿದ್ದಾರೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.