ADVERTISEMENT

ಟೆಕ್ಕಿ ಸೇರಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:06 IST
Last Updated 20 ಡಿಸೆಂಬರ್ 2013, 20:06 IST

ಹೊಸಕೋಟೆ: ಸಾಲದ ಹೊರೆ ತಾಳಲಾರದೆ ಸಾಫ್ಟ್‌ವೇರ್ ಎಂಜಿನಿಯರ್ ಸೇರಿದಂತೆ ಒಂದೇ ಕುಟುಂಬದ ಮೂರು ಮಂದಿ  ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಕೆ.ಆರ್.ಪುರ ಸಮೀಪದ ದೇವಸಂದ್ರದ ನಿವಾಸಿಗಳಾದ ರವಿ (45), ಪತ್ನಿ ಕಲ್ಪನಾ (38), ಮಗ ಸುಕೇಶ್ (17)ಎಂದು ಗುರುತಿಸಲಾಗಿದೆ.

ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸಮೀಪದ ಟೋಲ್‌ನಲ್ಲಿ ಟಾಟಾ ನ್ಯಾನೋ ಕಾರಿನ ನೋಂದಣಿ ಸಂಖ್ಯೆ ನಮೂದಾಗಿದೆ. ಕಾರನ್ನು ಗೊಟ್ಟಿಪುರ ಗೇಟ್ ಬಳಿ ನಿಲುಗಡೆ ಮಾಡಿ, ಕಾರಿನಲ್ಲಿಯೇ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಬಹಳ ಸಮಯವಾದರೂ ಕಾರು ಚಲಿಸದ ಕಾರಣ ಸಂಶಯಗೊಂಡ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳದಲ್ಲಿ ದೊರೆತ ಪತ್ರದಲ್ಲಿ ಸಾಲದ ಹೊರೆ ತಾಳಲಾರದೇ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಲಾಗಿದೆ.

ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಟ್ಯಾಂಕರ್‌ ಡಿಕ್ಕಿ: ಸಾಫ್ಟ್‌ವೇರ್ ಎಂಜಿನಿಯರ್ ಸಾವು

ಬೆಂಗಳೂರು: ನಗರದ ಕುಂದಲಹಳ್ಳಿ– ಮಾರತಹಳ್ಳಿ ಜಂಕ್ಷನ್‌ ಮಾರ್ಗದ ನಡುವೆ ಶುಕ್ರವಾರ ಬೆಳಿಗ್ಗೆ ಬೈಕ್‌ಗೆ ನೀರಿನ ಟ್ಯಾಂಕರ್‌ ಡಿಕ್ಕಿ ಹೊಡೆದು ವಿನಾಯಕ ನಾಮದೇವ ಪಟಂಕರ್ (23) ಎಂಬ ಸಾಫ್ಟ್‌ವೇರ್‌ ಎಂಜಿನಿಯರ್‌ ಸಾವನ್ನಪ್ಪಿದ್ದಾರೆ. ಮೂಲತಃ ಶಿಕಾರಿಪುರದ ವಿನಾಯಕ, ಎಚ್‌ಎಎಲ್‌ ಸಮೀಪದ ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಎಂಜಿನಿಯರ್‌ ಆಗಿದ್ದರು.

6 ತಿಂಗಳ ಹಿಂದಷ್ಟೆ ನಗರಕ್ಕೆ ಬಂದಿದ್ದ ಅವರು ವೈಟ್‌ಫೀಲ್ಡ್‌ ಸಮೀಪದ ತೂಬರಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಕೆಲಸಕ್ಕೆ ಹೋಗುವಾಗ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT